ಕ್ರೀಡಾ ಮನೋಭಾವನೆಯಿಂದ ಆಡಿ,ಗೆಲುವು-ಸೋಲು ಇದ್ದಿದ್ದೆ
ಕಲಬುರಗಿ: ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಆರಂಭಗೊಂಡ ಐ.ಟಿ.ಎಫ್ ಮೆನ್ಸ್ ಕಲಬುರಗಿ ಓಪನ್-2024 ಟೆನಿಸ್ ಟೂರ್ನಿಯ ಪ್ರುಖ ಸುತ್ತಿನ ಪಂದ್ಯಗಳಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಬಲೂನ್ ಹಾರಿಸಿದಲ್ಲದೆ ಟೆನಿಸ್ ಬಾಲ್ ಆಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದುಳಿದ ನೆಲ ಕಲಬುರಗಿಗೆ ದೇಶ-ವಿದೇಶದಿಂದ ಆಟಗಾರರು ಲಾನ್ ಟೆನಿಸ್ ಕ್ರೀಡೆಯಲ್ಲಿ ಭಾಗಸವಹಿಸಲು ಕಲಬುರಗಿಗೆ ಬಂದಿದ್ದು ಸಂತೋಷ. ಕ್ರೀಡಾಪಟುಗಳು ಸ್ಪರ್ಧಾ ಮನೋಭಾವದಿಂದ ಆಡಬೇಕು. ಗೆಲುವು-ಸೋಲು ಇದ್ದಿದೆ ಎಂದ ಅವರು ಕಲಬುರಗಿಯಲ್ಲಿ ಇಂತಹ ಒಂದು ಅಂತರಾಷ್ಟ್ರೀಯ ಮಟ್ಟದ ಟೂರ್ನಿ ಆಯೋಜಿಸಿರುವುದು ಸ್ಥಳೀಯ ಕ್ರೀಡಾಪಟುಗಳಿಗೆ ತುಂಬಾ ಉತ್ತೇಜನ ಸಿಗಲಿದೆ ಎಂದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತುಂಬಾ ಮತುವರ್ಜಿ ವಹಿಸಿ ಈ ಕ್ರೀಡಾಕೂಟ ಆಯೋಜಿಸಿದ್ದು, ಇದಕ್ಕಾಗಿ ಸಕಲ ಸಿದ್ಧತೆ ಸಹ ಮಾಡಿಕೊಳ್ಳಲಾಗಿದೆ. ಕ್ರೀಡಾ ಚಟುವಟಿಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೆ.ಕೆ.ಆರ್.ಡಿ.ಬಿ ಮಂಡಳಿಯಿಂದ 33 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮುಂದಿನ ದಿನದಲ್ಲಿ ಮಹಿಳೆಯರನ್ನು ಎಲ್ಲಾ ವಿಧದ ಕ್ರೀಡೆಯತ್ತ ಸೆಳೆಯಲು ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಾತನಾಡಿ, 25,000 ಯು.ಎಸ್. ಡಾಲರ್ ಮೊತ್ತದ ಟೂರ್ನಿಯಲ್ಲಿ 32 ಆಟಗಾರರು ಸಿಂಗಲ್ಸ್ ಮತ್ತು 16 ತಂಡಗಳು ಡಬಲ್ಸ್ನಲ್ಲಿ ಪರಸ್ಪರ ಸೆಣಸಲಿದ್ದಾರೆ. ಎ.ಟಿ.ಪಿ. ಉತ್ತಮ ರ‍್ಯಾಂಕ್ ಹೊಂದಿರುವ ಸುಮಾರು 11 ದೇಶ-ವಿದೇಶದ ಆಟಗಾರರು ಇದರಲ್ಲಿ ಭಾಗವಹಿಸಿರುವುದರಿಂದ ಉತ್ಕೃಷ್ಟ ದರ್ಜೆಯ ಟೆನಿಸ್ ಪ್ರದರ್ಶನ ಇಲ್ಲಿ ನಿರೀಕ್ಷಿಸಲಾಗುತ್ತಿದೆ. ಇನ್ನು ಕ್ರೀಡಾ ವಸತಿ ನಿಲಯದ ಮಕ್ಕಳನ್ನೇ ಬಾಲ್ ಬಾಯ್ಸಗಳನ್ನಾಗಿ ತೆಗೆದುಕೊಂಡಿದ್ದೇವೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ ಅವರು, ಕನ್ನಡಿಗ ಮೈಸೂರಿನ ಮನೀಷ್ ಗಣೇಶ ಮತ್ತು ಗುಜರಾತಿನ ದೇವ್ ಜಾವಿಯಾ ನಡುವಿನ ಪಂದ್ಯಕ್ಕೆ ಟಾಸ್ ಹೆಗರಿಸಿ ಪಂದ್ಯ ಆರಂಭಕ್ಕೆ ಅನುವು ಮಾಡಿಕೊಟ್ಟದಲ್ಲದೆ ಉಭಯ ಆಟಗಾರರಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕೆ.ಎಸ್.ಎಲ್.ಟಿ.ಎ. ಟೂರ್ನಮೆಂಟ್ ಡೈರೆಕ್ಟರ್ ಪೀಟರ್ ವಿಜಯಕುಮಾರ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ಆಹಾರ ಇಲಾಖೆ ಉಪನಿರ್ದೇಶಕ ಭೀಮರಾಯ, ಡಿ.ಎಚ್.ಓ. ಡಾ.ಶರಣಬಸಪ್ಪ ಖ್ಯಾತನಾಳ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ ಸೇರಿದಂತೆ ಇತರೆ ಅಧಿಕಾರಿಗಳು, ಕೆ.ಎಸ್.ಎಲ್.ಟಿ.ಎ. ಅಧಿಕಾರಿಗಳು, ಬಾಲ್ ಬಾಯ್ಸ್ಗಳು ಇದ್ದರು.