ಕಲಬುರಗಿ: ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಬಾಳಿನ ಅಜ್ಞಾನ ಕಳೆದು ಅರಿವು ಮೂಡಿಸಲು ಶ್ರೀ ಗುರುವಿನ ಬೋಧಾಮೃತ ಅವಶ್ಯಕ ಎಂದು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಡಾ. ವೀರಸೋಮೇಶ್ವರ್ ಜಗದ್ಗುರುಗಳು ಹೇಳಿದರು.
ತಾಲ್ಲೂಕಿನ ಹರಸೂರು ಕಲ್ಮಠದ ಕರಿಸಿದ್ಧೇಶ್ವರ್ ಶ್ರೀಗಳವರ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಭೌತಿಕ ಸಿರಿ ಸಂಪತ್ತು ಶಾಶ್ವತವಲ್ಲ. ಅಧ್ಯಾತ್ಮದ ಸಂಪತ್ತೇ ನಿಜವಾದ ಸಂಪತ್ತು. ಸಂಪತ್ತಿನ ಜೊತೆಗೆ ಸಂಸ್ಕಾರ ಸಂಸ್ಕೃತಿಗಳ ಅರಿವು ಮುಖ್ಯ ಎಂದರು. ಮನುಷ್ಯನಲ್ಲಿರುವ ಅಜ್ಞಾನ ಪರಿಹರಿಸಲು ಶ್ರೀ ಗುರು ಕಾರಣನಾಗಿದ್ದಾನೆ. ಪರಶಿವನ ಸಾಕಾರ ರೂಪ ಗುರು ರೂಪವೆಂದು ಸಿದ್ಧಾಂತ ಶಿಖಾಮಣಿಯಲ್ಲಿ ಸ್ಪಷ್ಟವಾಗಿ ಹೇಳಿದೆ. ಭವ ಬಂಧನವ ಪರಿಹರಿಸಿ ಶಿವಜ್ಞಾನ ಬೆಳೆಸಲು ಶ್ರೀ ಗುರುವೊಬ್ಬನೇ ಸಮರ್ಥ. ವೀರಶೈವ ಧರ್ಮದಲ್ಲಿ ಗುರುವಿಗೆ ಪ್ರಥಮ ಸ್ಥಾನ ಕಲ್ಪಿಸಿದೆ. ಶಿವಪಥವನರಿಯಲು ಗುರುಪಥ ಮೊದಲು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ಹರಸೂರು ಕಲ್ಮಠದ ಕರಿಸಿದ್ಧೇಶ್ವರ್ ಶ್ರೀಗಳು ಶ್ರೀ ಮಠದ ಅಧಿಕಾರ ವಹಿಸಿಕೊಂಡು ೧೨ ವರ್ಷಗಳು ತುಂಬಿವೆ. ಈ ಅಪೂರ್ವ ಸಂದರ್ಭದಲ್ಲಿ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಸಮಾರಂಭ ಹಮ್ಮಿಕೊಂಡಿದ್ದು ಸ್ತುತ್ಯ ಕಾರ್ಯ. ಶ್ರೀಗಳವರ ಅಧಿಕಾರಾವಧಿಯಲ್ಲಿ ಶ್ರೀ ಮಠ ಬೆಳೆದು ಅಭಿವೃದ್ಧಿಯಾಗಲೆಂದು ಬಯಸಿ ರೇಶ್ಮೆ ಮಡಿ ಫಲ ಪುಷ್ಪವನ್ನಿತ್ತು ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಮುತ್ಯಾನ್ ಬಬಲಾದ್ ಗುರುಪಾದಲಿಂಗ್‌ಶ್ರೀ, ಹಾರಕೂಡದ ಡಾ. ಚನ್ನವೀರ್ ಶ್ರೀ, ಪಾಳಾ ಡಾ. ಗುರುಮೂರ್ತಿ ಶ್ರೀ, ಸ್ಟೇಷನ್ ಬಬಲಾದ ರೇವಣಸಿದ್ಧ ಶ್ರೀ, ಹರಸೂರು ಸಿದ್ಧರಾಮ್ ಶ್ರೀ, ವೆಂಕಟಬೆನ್ನೂರು ಸಿದ್ಧರೇಣುಕ ಶ್ರೀ, ತ್ರಿಪುರಾಂತಕ ಘನಲಿಂಗ ರುದ್ರಮುನಿ ಶ್ರೀ, ಯಡ್ರಾಮಿ ರುದ್ರಮುನಿ ಶ್ರೀ, ಹರಸೂರು ಪರ್ವತೇಶ್ವರ್ ಮಠದ ಸಿದ್ಧರಾಮ್ ಶ್ರೀಗಳು ಪಾಲ್ಗೊಂಡು ಉಪದೇಶಾಮೃತವನ್ನಿತ್ತರು. ಕಲ್ಮಠದ ಕರಿಸಿದ್ಧೇಶ್ವರ್ ಶಿಚಾಚಾರ್ಯ ಸ್ವಾಮಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ರಂಭಾಪುರಿ ಜಗದ್ಗುರುಗಳಿಂದ ಗುರು ರಕ್ಷೆ ಕೊಡಿಸಲಾಯಿತು. ಎಂ.ವಿ. ಹಿರೇಮಠ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಬಸವರಾಜ್ ಮತ್ತೀಮೂಡ್, ಮಾಜಿ ಸಚಿವ ರೇವು ನಾಯಕ್ ಬೆಳಮಗಿ, ಶಿವಶರಣಪ್ಪ ಸೀರಿ ಮತ್ತು ಕರಸಿದ್ಧಪ್ಪ ಪಾಟೀಲ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪೂರ್ವದ ೨ ಗದ್ದುಗೆಗಳಿಗೆ ರಂಭಾಪುರಿ ಜಗದ್ಗುರುಗಳು ಕಳಸಾರೋಹಣ ನೆರವೇರಿಸಿದರು. ಸಮಾರಂಭಕ್ಕೂ ಮುನ್ನ ಗ್ರಾಮದ ಮುಖ್ಯ ರಸ್ತೆ ಮೂಲಕ ಮಠದವರೆಗೆ ರಂಭಾಪುರಿ ಜಗದ್ಗುರುಗಳವರನ್ನು ಸಾರೋಟ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಸಹಸ್ರಾರು ಭಕ್ತರು ಪಾಲ್ಗೊಂಡು ದರ್ಶನ ಪಡೆದರು.