ಕಲಬುರಗಿ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3ರಡಿ ಬರುವ ಜೇವರ್ಗಿ ತಾಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆ ಕುರಿತು ಶನಿವಾರ ಜೇವರ್ಗಿ ಶಾಸಕರು ಹಾಗೂ ಕೆಕೆಆರ್‌ಡಿಬಿ ಅಧ್ಯಕ್ಷರಾದ ಡಾ. ಅಜಯ್ ಧರ್ಮಸಿಂಗ್ ಅವರು ಮಲ್ಲಾಬಾದ್ ಏತ ನೀರಾವರಿ ಹೋರಾಟ ಸಮೀತಿಯ ಮುಖಂಡರೊಂದಿಗೆ ಮಹತ್ವದ ಸಭೆ ನಡೆಸಿದರು.
ಈ ನೀರಾವರಿ ಕಾಮಗಾರಿ ತ್ವರಿತ ಅನುಷ್ಠಾನದ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಹೆಚ್ಚು ಆಸಕ್ತಿ ತೋರಿದ್ದಾರೆ. ಬೆಳಗಾವಿ ಸದನದಲ್ಲಿ ತಾವು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು ಯೋಜನೆಯ ಜಾರಿಗೆ ಉದ್ದೇಶಿಸಲಾಗಿದೆ. ಸದರಿ ಯೋಜನೆಯಲ್ಲಿ ಪೂರ್ಣ ಹಾಗೂ ಪ್ರಗತಿಯಲ್ಲಿರುವ ಕಾಮಗಾರಿಗಳಿಗೆ 299 ಕೋಟಿ ರು ವೆಚ್ಚವಾಗಿದೆ ಎಂದು ನೀಡಿರುವ ಮಾಹಿತಿಯನ್ನು ಹೋರಾಟಗಾರರ ಗಮನಕ್ಕೆ ತಂದರು.
ಯೋಜನೆಯ ಅನಷ್ಠಾನದಲ್ಲಿ ವಿಳಂಬಕ್ಕೆ ಕೃಷ್ಣಾ ನ್ಯಾಯಾಧಿಕರಣದ ತೀರ್ಪು ಕಾರಣ, ಸದರಿ ಯೋಜನೆ ಯೂಕೆಪಿ 3 ನೇ ಹಂತದಲ್ಲಿರೋದರಿಂದ , ಇದೇ ನ್ಯಾಯಾಧಿಕರಣದ 2 ನೇ ಹಂತದ ಗೆಜೆಟ್ ಅಧಿಸೂಚನೆ ಹೊರಡಿಸುವಲ್ಲಿ ಕೇಂದ್ರದಲ್ಲಿ ವಿಳಂಬವಾಗುತ್ತಿದೆ. ಇದೇ ವಿಷಯವಾಗಿ ಸಮನ್ವಯ ಸಾಧಿಸಲಾಗುತ್ತಿದೆ. ಆದಾಗ್ಯೂ ಗೆಜೆಟ್ ಅಧಿಸೂಚನೆ ಹೊರತುಪಡಿಸಿಯೂ ಸಮಾನಾಂತರ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕೆಬಿಜೆಎನ್‌ಎಲ್ ನಿರ್ದೇಶಕ ಮಂಡಳಿಯ ಅನುಮೋದನೆ ಪಡೆದು ಕ್ರಮ ಜರುಗಿಸಲಾಗುತ್ತದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರಾಗಿರುವ ಡಿಕೆ ಶಿವಕುಮಾರ್ ಅವರು ಸದನದಲ್ಲಿ ನೀಡಿರುವ ಯೋಜನೆಯ ವಿವರಗಳನ್ನೆಲ್ಲ ಡಾ. ಅಜಯ್ ಸಿಂಗ್ ಹೋರಾಟಗಾರರ ಮುಂದೆ ಪ್ರಸ್ತಾಪಿಸಿದರು.
ಮಲ್ಲಾಬಾದ್ ನೀರಾವರಿ ಯೋಜನೆ ಬೇಗ ಅನುಷ್ಠಾನಕ್ಕೆ ತರಲು ಆಗ್ರಹಿಸಿ ಇದೇ ಡಿ. 16 ರಂದು ನಡೆಸಲು ಉದ್ದೇಶಿಸಿರುವ ಹೋರಾಟ ಕೈಬಿಡುವಂತೆಯೂ ಶಾಸಕರು ಇದೇ ಸಂದರ್ಭದಲ್ಲಿ ಹೋರಾಟಗಾರರಿಗೆ ಕೋರಿದರು.
ಮಲ್ಲಾಬಾದ್ ಏತ ನೀರಾವರಿ ಹೋರಾಟ ಸಮೀತಿಯ ಮಹೇಶ್ ಕುಮಾರ್ ರಾಥೋಡ್, ಬಾಬು ಪಾಟೀಲ್, ಮಹಾಂತಗೌಡ ಪಾಟೀಲ್ ನಂದಿಹಳ್ಳಿ, ಇಬ್ರಾಹಿಂ ಪಟೇಲ್ ಯಾಳವಾರ್, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರುಕುಂ ಪಟೇಲ್ ಇಜೇರಿ, ರಾಜಶೇಖರ್ ಸೇರಿ, ಕಾಶಿಮ್ ಪಟೇಲ್ ಮುದುವಾಳ, ಮನ್ನಾ ಪಟೇಲ್, ಗುರು ಸುಬೇದಾರ್, ರಾಮನಗೌಡ ಪಾಟೀಲ್ ಬಿಳವಾರ್ ಸೇರಿದಂತೆ ಅನೇಕರು ಸಭೆಯಲ್ಲಿದ್ದರು.