ಕಲಬುರಗಿ: ದಕ್ಷಿಣ ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ರಸ್ತೆಗಳನ್ನು ನನ್ನ ಅಧಿಕಾರದ ಮೊದಲ ಅವಧಿಯಲ್ಲಿಯೇ ಬಹುತೇಕ ಅಭಿವೃದ್ಧಿ ಮಾಡಲು ನಾನು ಸಂಕಲ್ಪ ಮಾಡಿದ್ದೆನೆ ಎಂದು ಶಾಸಕರಾದ ಅಲ್ಲಂಪ್ರಭು ಪಾಟೀಲ್ ಹೇಳಿದ್ದಾರೆ.
ಕಲಬುರಗಿ ನಗರದ ಆನಂದ ಹೋಟಲ್‌ನಿಂದ ಪಂಡಿತ ರಂಗ ಮಂದಿರವರೆಗೆ ಕೆಕೆಆರ್‌ಡಿಬಿ ಅನುದಾನದ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸಿಸಿ ರಸ್ತೆಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈ ರಸ್ತೆ ಮಾದರಿಯಾಗಿದೆ, ಅಕ್ಕಪಕ್ಕ ಪಾದಚಾರಿ ಪಥ, ಜೊತೆಗೆ ಅಗಲ ಹಾಗೂ ಗುಣಮಟ್ಟದ ರಸ್ತೆ ಇದಾಗಿದ್ದು ಜನ ಇದನ್ನು ಸರಿಯಾಗಿ ಬಳಸಿಕೊಳ್ಳುವಂತಾಗಲಿ ಎಂದರು.
ಕೆಕೆಆರ್‌ಡಿಬಿ ಅನುದಾನ ನಗರ ಪ್ರದೇಶ ಹೊಂದಿರುವ ತಮ್ಮ ಮತಕ್ಷೇತ್ರಕ್ಕೆ ಎಲ್ಲ ಶಾಸಕರಿಗಿಂತ ಸ್ವಲ್ಪ ಕಮ್ಮಿ ಬರುತ್ತಿದ್ದರೂ ಕೂಡಾ ತಾವು ಅನುದಾನಕ್ಕಾಗಿ ಎಲ್ಲರನ್ನು ಸಂಪರ್ಕಿಸಿ ಹೆಚ್ಚಿನ ಅನುದಾನ ಕಲಬುರಗಿಗೆ ತರುವ ಕೆಲಸ ಮಾಡುತ್ತಿದ್ದೇನೆ. ನಮ್ಮ ಸರಕಾರ ನುಡಿದಂತೆ ನಡೆದಿದೆ. ಗ್ಯಾರಂಟಿಗಳ ಜೊತೆಗೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಹೀಗಾಗಿ ಅಭಿವೃಧಿ ಎಂದಿಗೂ ನಿಂತಿಲ್ಲ ಎಂದರು.
ಈ ಭಾಗದ ಯುವ ರಾಜಕಾರಣಿ ಗ್ರಾಮೀಣಾಭಿವೃದ್ಧಿ, ಮತ್ತು ಪಂಚಾಯತ್ ರಾಜ್ ಐಟಿ/ಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಕಲ್ಯಾಣ ಪಥದಲ್ಲಿ ಹೆಚ್ಚಿನ ರಸ್ತೆ ನಿರಮಾಣಕ್ಕೆ ಮುಂದಾಗಿದ್ದಾರೆ. ಇದರಿಂದ ಬರುವ ದಿನಗಳಲ್ಲಿ ರಸ್ತೆಗಳು ಸುಧಾರಣೆ ಕಾಣಲಿವೆ ಎಂದು ಹೇಳಿದರು.
ಮೇಯರ್ ಯಲ್ಲಪ್ಪ ನೈಕೋಡಿ, ಎಂಎಲ್‌ಸಿ ತಿಪ್ಪಣ್ಣ ಕಮಕನೂರ್ , ಲಿಂಗರಾಜ ತಾರಫೈಲ್, ಲಿಂಗರಾಜ ಕಣ್ಣಿ, ರಾಜಗೋಪಾಲರೆಡ್ಡಿ, ಸಂಗಮೇಶ ನಾಗನಳ್ಳಿ, ವಿಶ್ವನಾಥ, ಭೀಮರಾಯ ಮೇಳಕುಂದಿ, ಭೀಮಾಶಂಕರ ಪಾಟೀಲ್, ಸಾಯಿನಾಥ್ ಪಾಟೀಲ್, ವಾಣಿಶ್ರೀ ಸಗರಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.