ಕಲಬುರಗಿ: ಪತ್ರಕರ್ತರು ಹೆಚ್ಚು ಸಂಬಳ ಪಡೆಯದಿರಬಹುದು ಆದರೆ ಅವರ ಕೆಲಸ ಮತ್ತು ಸೇವೆ ಅಮೂಲ್ಯವಾದದ್ದು. ಪತ್ರಕರ್ತರೆಂದರೆ ಸಮಾಜದ ಜಾಗೃತಿ ಜನರು. ಇದು ನಮಗೆಲ್ಲ ಸಂತೋಷ ಮತ್ತು ಹೆಮ್ಮೆಯ ವಿಷಯವೆಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಸ್. ಜಿ. ಡೊಳ್ಳೆಗೌಡರ್ ಅಭಿಪ್ರಾಯ ಪಟ್ಟರು.
ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂಹವನ ವಿಭಾಗದಿಂದ ಗುರುವಾರ ವಿಭಾಗದ ಅನುಭವ ಮಂಟಪದಲ್ಲಿ ಆಯೋಜಿಸಲ್ಪಟ್ಟ ಮೂವರು ಹಿರಿಯ ಪತ್ರಕರ್ತರು ಹಾಗೂ ಪ್ರಶಸ್ತಿಗೆ ಭಾಜನರಾದ ಎಸ್. ಆರ್. ಮಣೂರ್, ರಾಮಕೃಷ್ಣ ಬಡಶೇಷಿ ಹಾಗೂ ಶಿವಲಿಂಗಪ್ಪ ದೊಡ್ಡಮನಿಯವರಿಗೆ ಸನ್ಮಾನ ಸಮಾರಂಭ ಮತ್ತು ಹೊಸ ವಿದ್ಯಾರ್ಥಿಗಳ ಸ್ವಾಗತ ಹಾಗೂ ಹಳೆಯ ವಿದ್ಯಾರ್ಥಿಗಳ ಸಭೆಯ ಸಮಾರಂಭವನ್ನು ಸಸಿಗೆ ನೀರೆರೆಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಉದಯೋನ್ಮುಖ ಪತ್ರಕರ್ತರು ಈ ಮೂವರು ಹಿರಿಯ ಪತ್ರಕರ್ತರಿಂದ ಕಲಿಯಬೇಕಾದದ್ದು ಸಾಗರದಂತಿದೆ ಇದರ ಲಾಭವನ್ನು ಪಡೆದುಕೊಳ್ಳಿ. ಯಾವಾಗಲೂ ನೀವು ಬರೆಯುವ ಸುದ್ದಿಯು ಮಾನವೀಯತೆಯ ಪರಿಕಲ್ಪನೆಯಾಗಿರಬೇಕು. ಬರವಣಿಗೆಯ ಪ್ರೀತಿಯಲ್ಲಿ ಮುಳುಗಿ ಜನರ ಸಮಸ್ಯೆಗಳ ಕುರಿತಾದ ಸುದ್ದಿ ಬರೆಯಲು ಕಲಿಯಿರಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತನ್ನು ಹೇಳಿದರು.
ಪತ್ರಿಕೋದ್ಯಮದಲ್ಲಿ ಈ ಮೂವರು ಪತ್ರಕರ್ತರು ನಕ್ಷತ್ರಗಳಾಗಿದ್ದಾರೆ. ಮುಂಬರುವ ಪತ್ರಕರ್ತರು ತಮ್ಮ ಅನುಭವದೊಂದಿಗೆ ಹೆಚ್ಚು ಹೆಚ್ಚಾಗಿ ಕಲಿಯುತ್ತಾರೆ. ಸಾರ್ವಜನಿಕರೊಂದಿಗೆ ಸಂವಹನ ಮಾಡುವುದು ಜೀವನದ ಅದ್ಭುತ ಸಾಹಸವಾಗಿದೆ. ಪತ್ರಿಕೋದ್ಯಮವನ್ನು ಸರಳವಾಗಿ ಅನುಸರಿಸಬೇಡಿ ಅದಕ್ಕೆ ನಿಮ್ಮನ್ನು ನೀವು ಸಮರ್ಪಿಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಿ ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಟಿ. ಎಸ್. ಆರ್. ಪ್ರಶಸ್ತಿಗೆ ಭಾಜನರಾದ ಎಸ್. ಆರ್. ಮಣೂರ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ರಾಮಕೃಷ್ಣ ಬಡಶೇಷಿ ಹಾಗೂ ಮೋರೆ ಹನುಮಂತರಾಯ ಪ್ರಶಸ್ತಿಗೆ ಭಾಜನರಾದ ಶಿವಲಿಂಗಪ್ಪ ದೊಡ್ಡಮನಿ ಅವರಿಗೆ ಸತ್ಕರಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್. ಆರ್. ಮಣೂರ್, ಮೊದಲು ಪತ್ರಿಕೆಗಳು ಹಾಗೂ ಪತ್ರಕರ್ತರು ಬಹಳ ಕಡಿಮೆ ಇದ್ದರು. ಆಗಿನ್ನೂ ತಂತ್ರಜ್ಞಾನ ಮುಂದುವರೆದಿರಲಿಲ್ಲ. ಆಗ ಪತ್ರಿಕೆ ಹಾಗೂ ಬರವಣಿಗೆಯಲ್ಲಿ ಗುಣಮಟ್ಟದಾಗಿರುತ್ತಿತ್ತು. ಆದರೆ ಇಂದು ಪತ್ರಿಕೆಗಳು ಹಾಗೂ ಪತ್ರಕರ್ತರು ತುಂಬಾ ಹೆಚ್ಚಾಗಿದ್ದಾರೆ. ಆದರೂ ಗುಣಮಟ್ಟದ ಬರವಣಿಗೆ ಹಾಗೂ ಸುದ್ದಿ ನಮಗೆ ಕಾಣಸಿಗುತ್ತಿಲ್ಲ.
ಪತ್ರಿಕಾರಂಗ ಈಗ ಪತ್ರಿಕೋದ್ಯಮವಾಗಿದೆ. ಈ ಉದ್ಯಮದಲ್ಲಿ ಪತ್ರಕರ್ತರು ಮುಕ್ತವಾಗಿ ಹಾಗೂ ಯಶಸ್ವಿಯಾಗಿ ಕೆಲಸಮಾಡಲಾಗುತ್ತಿಲ್ಲ. ಪತ್ರಕರ್ತರು ಯಾವಾಗಲೂ ಜನರ ಧ್ವನಿಯಾಗಿ ಅವರ ಸಮಸ್ಯೆಗಳತ್ತ ಗಮನ ಹರಿಸಿ ಸರಕಾರಕ್ಕೆ ಮುಟ್ಟಿಸುವ ಸಮಾಜದ ಕೊಂಡಿಯಾಗಿ ಕೆಲಸ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸನ್ಮಾನ ಸ್ವೀಕರಿಸಿದ ಇನ್ನೊಬ್ಬ ಹಿರಿಯ ಪತ್ರಕರ್ತರಾದ ರಾಮಕೃಷ್ಣ ಬಡಶೇಷಿ ಮಾತನಾಡಿ, ನನ್ನ ಜೀವನದಲ್ಲಿ ಪತ್ರಕರ್ತನಾಗಿ ಹಿರಿಯನಾಗಿದ್ದರು ಕಲಿಯುವುದಿನ್ನೂ ಸಾಕಷ್ಟಿದೆ. ಎಸ್. ಆರ್. ಮಣೂರ್ ಹಾಗೂ ಟಿ. ವಿ. ಶಿವಾನಂದನ್ ಅವರಿಂದ ಬಹಳ ಕಲಿತಿದ್ದೇನೆ. ಅವರು ನನಗೆ ಯಾವಾಗಲೂ ಹುರಿದುಂಬಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಭಾಜನವಾಗುವ ಮಟ್ಟಕ್ಕೆ ಬೆಳೆದಿರುವುದು ಇವರಿಬ್ಬರ ಶ್ರಮ ಹಾಗೂ ಕೊಡುಗೆಯಿಂದ ಎಂದರು.
ಸನ್ಮಾನ ಸ್ವೀಕರಿಸಿದ ಇನ್ನೊಬ್ಬ ಹಿರಿಯ ಪತ್ರಕರ್ತರಾದ ಶಿವಲಿಂಗಪ್ಪ ದೊಡ್ಡಮನಿ ತಮ್ಮ ಭಾಷಣದಲ್ಲಿ, ನಾನು ನನ್ನ ಪತ್ರಿಕೆಯ ಸಂಪಾದಕನಾಗಿ ಇಷ್ಟೆತ್ತರಕ್ಕೆ ಬೆಳೆದಿದ್ದು ತಳಮಟ್ಟದಿಂದ. ಒಂದು ಪತ್ರಿಕೆ ನಡೆಸುವುದು ಸಾಮಾನ್ಯ ಕೆಲಸವಲ್ಲ ಅದರಲ್ಲಿ ತುಂಬಾ ಪತ್ರಕರ್ತರ ಶ್ರಮ ಅಡಗಿರುತ್ತದೆ. ಪತ್ರಕರ್ತರಾಗಬೇಕೆಂದರೆ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು ಹಾಗೂ ಬರವಣಿಗೆಯ ಮುಖಾಂತರ ಸರಕಾರವು ಎಚ್ಚೆತ್ತುಕೊಳ್ಳುವಂತೆ ಮಾಡಬೇಕು. ಶ್ರಮ ಪಟ್ಟರೆ ಯಾವುದು ಅಸಾಧ್ಯವಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊಸ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಪತ್ರಿಕೋದ್ಯಮ ವಿಭಾಗದ ಡೀನ್ ಟಿ. ವಿ. ಶಿವಾನಂದನ್ ಅಥಿತಿಗಳ ಪರಿಚಯ ಮಾಡಿ ಸ್ವಾಗತಿಸಿದರು.
ವಿದ್ಯಾರ್ಥಿಗಳಾದ ಕು. ಯಶಸ್ವಿನಿ ನಿರೂಪಿಸಿದರೆ, ಈಶ್ವರ್ ಪೂಜಾರಿ ವಂದಿಸಿದರು.