ಸುರಪುರ: ನಮ್ಮ ರಾಜ್ಯದಲ್ಲಿ ಸರ್ಕಾರ ಕನ್ನಡಿಗರಿಗೆ ಸಕಲ ಸೌಲಭ್ಯ ನೀಡಬೇಕು. ಮುಖ್ಯವಾಗಿ ಅರ್ಹ ಕನ್ನಡಿಗರಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು. ಉದ್ಯೋಗಾಕಾಂಕ್ಷಿಗಳಿಗೆ ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡಬೇಕು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಶೆಟ್ಟಿ ಬಣದ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಗೆದ್ದಲಮರಿ ಆಗ್ರಹಿಸಿದರು.
ನಗರದ ತಿಮ್ಮಾಪುರ ಬಸ್‌ನಿಲ್ದಾಣದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವದ ಆಂಗವಾಗಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಕಲಬುರ್ಗಿ ಮಾತನಾಡಿ, ರಾಜ್ಯದ ಆಡಳಿತ ಭಾಷೆ ಸಂಪೂರ್ಣ ಕನ್ನಡೀಕರಣವಾಗಬೇಕು. ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇಕಡಾ ೫೦ ರಷ್ಟು ಮೀಸಲಾತಿ ದೊರಕಬೇಕು. ಖಾಸಗಿ ವಲಯದಲ್ಲೂ ಮೀಸಲಾತಿ ಅಳವಡಿಸಬೇಕು ಎಂದು ಒತ್ತಾಯಿಸಿದರು.
ಕಾರ್ಯಾಧ್ಯಕ್ಷ ನಿಂಗಪ್ಪನಾಯಕ ಬಿಜಾಸಪುರ ಮಾತನಾಡಿ, ಕನ್ನಡ ಪರ ಸಂಘಟನೆಗಳು ಕನ್ನಡ ಭಾಷೆ, ನೆಲ, ಜಲ, ಸಂಸ್ಕೃತಿ ಉಳಿಸಲು ಇನ್ನಷ್ಟು ಹೋರಾಟ ರೂಪಿಸಬೇಕು. ಕನ್ನಡಿಗರ ಮೇಲೆ ಅಗುತ್ತಿರುವ ದಬ್ಬಾಳಿಕೆ, ದೌರ್ಜನ್ಯ ತಡೆಗಟ್ಟಲು ಹೋರಾಟ ಮಾಡಬೇಕು ಎಂದು ಕರೆ ನೀಡಿದರು.
ಖಾಸೀಮಸಾಬ ಪಠಾಣ, ನಾಗರಾಜ ಸಾಹುಕಾರ, ಬಂದೇನವಾಜ ಚೌಧರಿ, ಮಹ್ಮದ್ ಹುಸೇನ್, ಸಿದ್ರಾಮ ಎಲಿಗಾರ, ಮಲ್ಲೇಶಿ ವಡ್ಡರ್, ಮಹ್ಮದ್ ಯುನುಸ್, ಭರತಕುಮಾರ ವೈದ್ಯ, ಭಾಷಾ ಪಾನವಾಲೆ ಮತ್ತು ಶಾಲಾ ಮಕ್ಕಳು ಇದ್ದರು.