ಹುಮನಾಬಾದ: ಹನ್ನೇರಡನೆಯ ಶತಮಾನದ ಬಸವಾದಿ ಶರಣರ ವಿಚಾರಗಳನ್ನು ಇಂದಿನ ಸಮಾಜದಲ್ಲಿ ಬಿತ್ತಿ, ಸಮಾನತೆಯ ತತ್ವ ಸಾರುವ ನಿಟ್ಟಿನಲ್ಲಿ ಇಲ್ಲಿನ ಬಸವ ಸೇವಾ ಪ್ರತಿಷ್ಠಾನದ ವತಿಯಿಂದ ಬೀದರ ಜಿಲ್ಲೆಯ ಹುಮನಾಬಾದ ಪಟ್ಟಣದ ಗೃಹ ನಿರ್ಮಾಣ ಸಹಕಾರ ಸಂಘದ ಕಲ್ಯಾಣ ಮಂಟಪದಲ್ಲಿ ನವೆಂಬರ 10 ರಂದು ಸಾಯಂಕಾಲ 6 ಗಂಟೆಗೆ 203ನೇ ‘ಬಸವಜ್ಯೋತಿ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿಗಳೂ ಆದ ತಾಲೂಕಾ ಆರೋಗ್ಯ ಇಲಾಖೆಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರಾಚಯ್ಯಸ್ವಾಮಿ ಸಂಗಮಕರ್ ತಿಳಿಸಿದ್ದಾರೆ.
ಬೀದರಿನ ಲಿಂಗಾಯತ ಮಹಾಮಠದ ಪೂಜ್ಯ ಶ್ರೀ ಅಕ್ಕ ಅನ್ನಪೂರ್ಣ ತಾಯಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮ ತಾಲೂಕಾ ಆರೋಗ್ಯಾಧಿಕಾರಿ ಡಾ.ಅಶೋಕ ಮೈಲಾರಿ ಉದ್ಘಾಟಿಸಲಿದ್ದು, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ವಿಶೇಷ ಅನುಭಾವ ನೀಡಲಿದ್ದಾರೆ.
ಘಾಟಬೋರಳದ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರವಿಶಂಕರ ಖಂಡ್ರೆ, ಬಸವ ಸೇವಾ ಪ್ರತಿಷ್ಠಾನದ ಪ್ರಮುಖರಾದ ಶರಣಪ್ಪ ಪಾಟೀಲ ಬೆಳಕೇರಾ, ಸುಭಾಷ ವಾರದ, ಉದ್ಯೋಗ ಮತ್ತು ತರಬೇತಿ ಇಲಾಖೆಯ ನಿವೃತ್ತ ಆಡಳಿತಾಧಿಕಾರಿ ಕಲ್ಲಪ್ಪ ಮಾಶೆಟ್ಟಿ ಹುಡಗಿ ಉಪಸ್ಥಿತರಿರುವರು.
ಬಸವ ಸೇವಾ ಪ್ರತಿಷ್ಠಾನದ ಶೋಭಾ ಔರಾದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.