ವಾಡಿ: ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಡಿತಗೊಳಿಸಿದ ಸರಕಾರದ ಕ್ರಮವನ್ನು ಖಂಡಿಸಿ ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಗುರುವಾರ ಪಟ್ಟಣದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ವೃತ್ತದಲ್ಲಿ ಜಮಾಯಿಸಿದ್ದ ವಿವಿಧ ಪ್ರೌಢ ಶಾಲೆಗಳ ನೂರಾರು ವಿದ್ಯಾರ್ಥಿಗಳು, ಮಾನವ ಸರ್ಪಳಿ ನಿರ್ಮಿಸುವ ಮೂಲಕ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ೮ ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳ ವೇತನ ಕಡಿತಗೊಳಿಸಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಆರೋಪಿಸಿ ಧಿಕ್ಕಾರ ಹಾಕಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಸ್ಥಿತಿಗತಿ ಸುಧಾರಿಸಲು ಹೊಸ ಯೋಜನೆಗಳನ್ನು ರೂಪಿಸಬೇಕಾದ ಸರಕಾರ, ಇರುವ ಸೌಲಭ್ಯಗಳನ್ನು ಕಡಿತಗೊಳಿಸುತ್ತಿದೆ ಎಂದು ದೂರಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ರಾಜ್ಯದಲ್ಲಿ ನೆರೆ ಹಾವಳಿ ಉಂಟಾಗಿ ನೂರಾರು ಹಳ್ಳಿಗಳ ಜನರು ನಿರಾಶ್ರಿತರಾಗಿದ್ದಾರೆ. ಅವರ ನೆರವಿಗೆ ಸ್ಪಂಧಿಸಲು ಅನುದಾನ ಕೊರತೆಯುಂಟಾಗಿದೆ. ಆ ಕಾರಣಕ್ಕೆ ಪ್ರಸಕ್ತ ಸಾಲಿನಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಕಡಿತಗೊಳಿಸಲಾಗುತ್ತಿದೆ ಎಂದು ಹೇಳುವ ಮೂಲಕ ಅಸಹಾಯಕತೆ ಪ್ರದರ್ಶಿಸುತ್ತಿರುವ ರಾಜ್ಯ ಬಿಜೆಪಿ ಸರಕಾರ ಅಪ್ರಜಾತಾಂತ್ರಿಕ ನೀತಿ ಅನುಸರಿಸುತ್ತಿದೆ. ಅಲ್ಲದೆ ಬಡ ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿನ ಮೇಲೆ ಸವಾರಿ ಮಾಡಿದೆ. ಅನುದಾನ ಕೊರತೆಯಿದ್ದರೆ ಅದನ್ನು ಹೆಚ್ಚಿಸಬೇಕೇ ಹೊರತು ವಿದ್ಯಾರ್ಥಿ ವೇತನ ಕಡಿತಗೊಳಿಸಬಾರದು. ಸರಕಾರದ ಧೋರಣೆ ವಿದ್ಯಾರ್ಥಿಗಳನ್ನೇ ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ. ಕೂಡಲೇ ನಿರ್ಧಾರ ಹಿಂಪಡೆಯಬೇಕು. ನಿರ್ಲಕ್ಷ್ಯ ವಹಿಸಿದರೆ ಎಐಡಿಎಸ್‌ಒ ರಾಜ್ಯಾಧ್ಯಂತ ಹೋರಾಟಕ್ಕೆ ಕರೆ ನೀಡಲಿದೆ ಎಂದು ಎಚ್ಚರಿಸಿದರು.
ಎಐಡಿಎಸ್‌ಒ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಜಾತಂತ್ರದ ಸಾಂವಿಧಾನಿಕ ಹಕ್ಕುಗಳು ಹರಣವಾಗುತ್ತಿವೆ. ಹೋರಾಟಗಳನ್ನು ಹತ್ತಿಡಲಾಗುತ್ತಿದೆ. ಅನ್ಯಾಯದ ವಿರುದ್ಧ ಮಾತನಾಡುವ ಹಕ್ಕು ಕಸಿದುಕೊಳ್ಳಲಾಗುತ್ತಿದೆ. ಸರಕಾರದ ನೀತಿಗಳನ್ನು ಪ್ರಶ್ನೆ ಮಾಡಿದವರನ್ನು ಬಂಧಿಸಲಾಗುತ್ತಿದೆ. ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಜನಸಾಮಾನ್ಯರ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ. ದೇಶದಲ್ಲಿ ವಿದ್ಯಾರ್ಥಿ-ಯುವಜನರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಯಾವೂದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸದಸ್ಯ ಮಲ್ಲಿನಾಥ ಹುಂಡೇಕಲ್ ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿದರು. ಸಂಘಟನಾಕಾರರಾದ ದತ್ತು ಹುಡೇಕರ, ಅರುಣಕುಮಾರ ಹಿರೆಬಾನರ, ನಾಗರಾಜ ಸೂಲಹಳ್ಳಿ, ಭೀಮು ಆಂದೋಲಾ, ರಾಘವೇಂದ್ರ ಅಲ್ಲಿಪುರ, ಖದೀರ ಡೋಣಗಾಂವ, ನಾಗರಾಜ ಅಕ್ಕಿ, ಶಿವುಕುಮಾರ ಆಂದೋಲಾ ಪಾಲ್ಗೊಂಡಿದ್ದರು.