೨೦೧೯-ರ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿಗೆ ಆಯ್ಕೆ

0
207

ಬಸವಕಲ್ಯಾಣ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಇಲ್ಲಿನ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪ ೪೦ನೇ ಶರಣ ಕಮ್ಮಟ ಹಾಗೂ ಅನುಭವ ಮಂಟಪ ಉತ್ಸವ ನ. ೨೩ ಮತ್ತು ೨೪ರಂದು ನಡೆಯಲಿದ್ದು, ಈ ಬಾರಿಯ (೨೦೧೯) ಡಾ. ಎಂ.ಎಂ. ಕಲ್ಬುರ್ಗಿ ರಾಷ್ಟ್ರೀಯ ಸಂಶೋಧನ ಪ್ರಶಸ್ತಿಗೆ ಕಲಬುರಗಿಯ ಡಾ. ಜಯಶ್ರೀ ಡಾ. ವೀರಣ್ಣ ದಂಡೆ ದಂಪತೊಯನ್ನು ಆಯ್ಕೆ ಮಾಡಲಾಗಿದೆ ಎಂದು ಅನುಭವ ಮಂಟಪದ ಅಧ್ಯಕ್ಷ ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಡಾ.ಎಂ.ಎಂ.ಕಲಬುರ್ಗಿಯವರು ಈ ನಾಡು ಕಂಡ ಅಪರೂಪದ ಸಂಶೋಧಕರು. ಅವರ ಮಾರ್ಗ ಸಂಶೋಧನ ಕೃತಿಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲುಗಳು. ವಿನೂತನವಾದ ಚರಿತ್ರೆಯ ಕಟ್ಟುವಿಕೆಗೆ ಒಂದು ಹೊಸ ಭಾಷ್ಯ ಬರೆದವರು. ಕನ್ನಡದ ಮಹಾಸಂಶೋಧಕ, ಲಿಂಗಾಯತ ಚಿಂತಕನನ್ನು ಸದಾ ಸ್ಮರಣೆಯಲ್ಲಿರಿಸಿಕೊಳ್ಳುವ ದೃಷ್ಟಿಯಿಂದ ಹಾಗೂ ಅಂಥ ಪ್ರಗತಿಪರ ಚಿಂತಕರಿಗೆ ಪ್ರೋತ್ಸಾಹಿಸುವ ಸಲುವಾಗಿ ೨೦೧೬ ರಿಂದ ಅನುಭವಮಂಟಪದಲ್ಲಿ ಅವರ ಹೆಸರಿನ ಪ್ರಶಸ್ತಿ ಕೊಡಲು ನಿರ್ಧರಿಸಲಾಗಿದೆ. ಈ ಪ್ರಶಸ್ತಿಯು ೫೦ ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ. ಇದರ ದಾಸೋಹಿಗಳು ಶರಣ ಶ್ರೀ ಬಸವರಾಜ ಕಾಶಪ್ಪ ಧನ್ನೂರ, ಉದ್ಯಮಿಗಳು, ಬೀದರ ಆಗಿರುತ್ತಾರೆ.

Contact Your\'s Advertisement; 9902492681

ಡಾ.ಜಯಶ್ರೀ ದಂಡೆ ಡಾ.ವೀರಣ್ಣ ದಂಡೆ ಪರಿಚಯ: ಡಾ.ಜಯಶ್ರೀ ಡಾ.ವೀರಣ್ಣ ದಂಡೆ ದಂಪತಿಗಳೆಂದರೆ, ಕಣ್ಣು ಎರಡು ನೋಟ ಒಂದು, ದೇಹವೆರಡು ಜೀವ-ಭಾವ ಒಂದು. ಅಧ್ಯಯನ, ಅಧ್ಯಾಪನ, ಸಂಶೋಧನೆಗೆ ಬದುಕು ಮೀಸಲಿಟ್ಟು ಶರಣ ತತ್ವ ಉಸಿರಾಗಿಸಿಕೊಂಡವರು. ಸಹನಶೀಲತೆ, ಶಿಸ್ತು, ಸರಳತೆ, ದೇಶಿ ಚಿಂತನೆ ಈ ದಂಪತಿಗಳ ಬಾಳಿನ ಅಂತಃಶಕ್ತಿಗಳು. ಸತಿಪತಿಗಳಿಬ್ಬರು ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ, ತಾವೇರಿದ ಹುದ್ದೆಗಳಿಗೆ ಗೌರವ ತಂದು ಕೊಡುವ ಮೂಲಕ ನೂರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿ ವಿಶ್ರಾಂತ ಜೀವನವನ್ನು ಶರಣ ಸಾಹಿತ್ಯ ಸಂಶೋಧನೆಗೆ ಮೀಸಲಾಗಿಟ್ಟ ಅಪರೂಪದ ಅದ್ವಿತೀಯ ದಂಪತಿಗಳು.

ಡಾ.ಜಯಶ್ರೀ ದಂಡೆ: ಅಗಾಧ ತಾಯ್ತನ ಪ್ರೀತಿಯ ಅಪರೂಪದ ವ್ಯಕ್ತಿತ್ವ. ಬೆಡಗಿನ ವಚನ ಕುರಿತು ಪಿಎಚ್.ಡಿ.ಸಂಶೋಧನೆ ಮಾಡಿ, ಸು.೩೧ ಸ್ವತಂತ್ರ ಕೃತಿ ಬರೆದಿದ್ದರಲ್ಲಿ ಶರಣ ಸಾಹಿತ್ಯ-ಸಂಸ್ಕೃತಿಯ ಚಿಂತನ ಕುರಿತಂತೆ ೨೯ ಕೃತಿಗಳಿವೆ. ಡಾ.ಬಿ.ಬಿ.ಹೆಂಡಿ, ಡಾ.ಬಿ.ಡಿ.ಜತ್ತಿ, ಮೊದಲಾದ ಜೀವನ ಚರಿತ್ರೆಗಳು, ೩ ವಚನ ವ್ಯಾಖ್ಯಾನ, ೧೬ ಸಂಪಾದಿತ ಕೃತಿಗಳು ಹೊರ ತಂದಿದ್ದಾರೆ. ಕಲಬುರಗಿ ಜಿಲ್ಲೆಯ ಶುಭಕಾರ್ಯದ ಹಾಡು, ಶರಣರ ಕ್ಷೇತ್ರ ಕಾರ್ಯ, ಶರಣರ ಸ್ಮಾರಕಗಳ ಕ್ಷೇತ್ರ ಕಾರ್ಯ, ಸಂಶೋಧನಾ ಯೋಜನೆಗಳು ಕೈಗೊಂಡವರು. ೧೫ ಪಿಎಚ್. ಡಿ. ೨೦ ಎಂ.ಫಿಲ್ ವಿದ್ಯಾರ್ಥಿಗಳಿಗೆ ಸಂಶೋಧನಾ ಮಾರ್ಗದರ್ಶನ ಮಾಡಿದವರು.

ಡಾ.ವೀರಣ್ಣ ದಂಡೆ ; ನಮ್ಮ ನಾಡಿನ ಶ್ರೇಷ್ಠ ಜಾನಪದ ವಿದ್ವಾಂಸರು. ಖ್ಯಾತ ದೇಶಿ ಚಿಂತನೆಯ ಸಂಶೋಧಕರೂ ಆದ ಡಾ.ವೀರಣ್ಣ ದಂಡೆ ಜೀವ ಕಾರುಣ್ಯದ ಜನಪರ ಕಾಳಜಿಯುಳ್ಳವರು. ಗುಲಬರ್ಗಾ ವಿಶ್ವವಿದ್ಯಾಲಯ ಕಲಾ ನಿಕಾಯದ ಡೀನರಾಗಿ, ವಿದ್ಯಾವಿಯಕ ಪರಿಷತ್ ಸದಸ್ಯರಾಗಿ, ಕರ್ನಾಟಕ ಜಾನಪದ-ಯಕ್ಷಗಾನ ಅಕಾಡೆಮಿಯ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿಯ ಪರಿಶೀಲಕರಾಗಿ ಸಲ್ಲಿಸಿದ ಸೇವೆ ಅಪಾರವಾದದ್ದು.
ಕನ್ನಡ ಜಾನಪದ ಪ್ರಜ್ಞೆ, ದೇಶಿ ದೃಷ್ಟಿ, ವಚನಗಳ ದೇಶಿಗುಣ ಸೇರಿದಂತೆ ೧೧ ಸ್ವತಂತ್ರ, ೯ ಕಾವ್ಯಮಿಮಾಂಸೆ ಕೃತಿಗಳು, ೨ ಶಾಸ್ತ್ರೀಯ ಸಂಪಾದನೆಗಳು, ೧೪ ಜನಪದ ಸಾಹಿತ್ಯ ಸಂಗ್ರಹಗಳು, ಪ್ರಜಾವಾಣಿ ಅಂಕಣ ಬರಹದ ೩ ಕಲರವ ಕೃತಿಗಳು, ೪ ದೇಶಿ ಸಂಪುಟಗಳು, ೭ ಬೃಹತ್ ಸಂಪುಟಗಳು, ೧೨೫ ಸಂಶೋಧನ ಲೇಖನಗಳು, ೨೦೫ ಅಂಕಣ ಬರಹ ಬರೆದಿದ್ದಾರೆ.

ದಂಪತಿಗಳಿಬ್ಬರೂ ಸೇರಿ ಕನ್ನಡ, ಶರಣ ಸಾಹಿತ್ಯ, ಸಂಶೋಧನೆಯ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುತ್ತಿರುವ ಕಾರಣ ನಾಡಿನ ಖ್ಯಾತ ಸಂಶೋಧಕರಿಗೆ ಕೊಡುವ ಪ್ರತಿಷ್ಠಿತ ಡಾ. ಎಂ. ಎಂ. ಕಲಬುರ್ಗಿ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here