ಕಮಲಾಪುರ: ಇಂದಿನ ಮಕ್ಕಳೇ ನಾಳಿನ ಪ್ರಭುಗಳು ಎಂಬಂತೆ ಮಕ್ಕಳು ದೇಶದ ಸಂಪತ್ತರಾಗಿದ್ದಾರೆ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಹೇಳಿದರು.
ತಾಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಈಚೆಗೆ ನಡೆದ ಮಕ್ಕಳ ಸಾಹಿತ್ಯ ಪರಿಷತ್ತು ಕಮಲಾಪುರ ತಾಲೂಕ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ದೈಹಿಕ ಮತ್ತು ಮಾನಸಿಕವಾಗಿ ಸದೃಡಗೊಳಿಸಲು ಪಠ್ಯ ಜತೆ ಪಠೇತರ ಚಟುವಟಿಕೆಗಳಿಗೆ ಒತ್ತು ನೀಡಬೇಕು. ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹಾಕಲು ಇಂತಹ ವೇದಿಕೆ ಕಲ್ಪಿಸಿಕೊಡಬೇಕು.
ಆದರೆ ಸದ್ಯದ ಕಂಪೂಟರ ಯುಗದಲ್ಲಿ ಟಿವಿ, ಮೊಬೈಲ್ ಮತ್ತು ಕಂಪ್ಯೂಟರ್ ಗಳಿಂದ ಆದಷ್ಟು ದೂರವಿದ್ದು, ಇತಿಮಿತಿಯೊಳಗೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ಮಕ್ಕಳ ಸಾಹಿತ್ಯ ಸ್ಥಳೀಯ ಅಧ್ಯಕ್ಷ ಡಾ. ಶರಣ ಬಸಪ್ಪ ವಡ್ಡನಕೇರಿ ಪ್ರಾಸ್ತಾವಿಕ ಮತ್ತು ಸ್ವಾಗತಿಸಿದರು. ಪಾಳಾದ ಸುಭಾಷ್ ಚಂದ್ರ ಪಾಟೀಲ ಸ್ಮಾರಕ ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಶರಣಗೌಡ ಪಾಟೀಲ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವಕಾಶಗಳಿಂದ ವಂಚಿತರಾಗುತ್ತಾರೆ.
ಈ ರೀತಿ ಉತ್ತಮ ವೇದಿಕೆ ಕಲ್ಪಿಸಿಕೊಟ್ಟಾಗ ಮುಂದೆ ಬರಲು ಸಾಧ್ಯ ಎಂದರು. ಸರ್ಕಾರಿ ಪ್ರೌಢ ಶಾಲೆಯ ಪ್ರಭಾರ ಮುಖ್ಯ ಗುರು ರಾಜೇಂದ್ರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘಟಕರಾದ ನಾಗರಾಜ ಸಿರೋಣ, ವೀರಯ್ಯ ಸ್ವಾಮಿ, ಸತೀಶ್ ಸೇರಿದಂತೆ ಸಾಹಿತ್ಯಾಕ್ತರು ಇದ್ದರು. ಕು ಭವಾನಿ ಕನಶೆಟ್ಟಿ ನಿರೂಪಿಸಿ, ವಂದಿಸಿದರು.