ಕಲಬುರಗಿ: ಈ ಭಾಗದ ಜನರ ಬಹುದಿನಗಳ ಬೇಡಿಕೆ ಇಡೇರುವ ಘಳಿಗೆ ಬಂದಿದೆ. ನವೆಂಬರ್ ೨೨ರಿಂದ ಕಲಬುರಗಿ – ಬೆಂಗಳೂರು ಮೊದಲ ವಿಮಾನಯಾನ ಪ್ರಾರಂಭವಾಗಲಿದೆ. ಸ್ಟಾರ್ ಏರ್ ಏರ್ಲೈನ್ಸ್ ಸಂಸ್ಥೆಯ ವಿಮಾನ ಬರಲಿದ್ದು, ಮೊದಲ ಟಿಕೆಟ್‌ನ್ನು ಸಂಸದ ಡಾ. ಉಮೇಶ್ ಜಾಧವ್ ಅವರು ಪಡೆದಿದ್ದಾರೆ.
ನವೆಂಬರ್ ೨೨ರಂದು ಮಧ್ಯಾಹ್ನ ೧೨-೨೦ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಟು, ೧.೫೫ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬಂದಿಳಿಯಲಿದೆ. ಮತ್ತೆ ೧.೫೫ಕ್ಕೆ ಕಲಬುರ್ಗಿಯಿಂದ ಬೆಂಗಳೂರಿಗೆ ತೆರಳಲಿದೆ.
ನವೆಂಬರ್ ೨೨ರಂದು ಪ್ರಾರಂಭವಾಗುವ ಮೊದಲ ವಿಮಾನದಲ್ಲಿ ಪ್ರಯಾಣಿಸಲು ಈಗಾಗಲೇ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದೆ. ಸಂಸದ ಡಾ. ಉಮೇಶ್ ಜಾಧವ್ ಅವರು ೭೯೯೮ರೂ.ಗಳ ಮೊದಲ ಟಿಕೆಟ್ ಪಡೆಯುವ ಮೂಲಕ ಮೊದಲ ಪ್ರಯಾಣಿಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನಿಂದ ಕಲಬುರ್ಗಿಗೆ ಹಾಗೂ ಕಲಬುರ್ಗಿಯಿಂದ ಬೆಂಗಳೂರಿಗೆ ಮೊದಲ ಟಿಕೆಟ್ ಪಡೆದು ಮೊದಲ ಪ್ರಯಾಣಿಕರಾಗಿ ಪ್ರಯಾಣಿಸಲಿದ್ದೇನೆ ಎಂದು ಸಂಸದ ಡಾ. ಉಮೇಶ್ ಜಾಧವ್ ಅವರು ಟ್ವಿಟರ್ ಖಾತೆಯಲ್ಲಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ.
ನವೆಂಬರ್ ೨೨ರಿಂದ ಕಲಬುರ್ಗಿಯಿಂದ ಬೆಂಗಳೂರಿಗೆ ವಿಮಾನ ಸೇವೆ ಆರಂಭವಾದರೂ ಸಹ ೨೩ರಂದು ವಿಮಾನ ಸೇವೆ ಇಲ್ಲ. ನವೆಂಬರ್ ೨೪ರಿಂದ ಪ್ರತಿದಿನ ವಿಮಾನ ಸೇವೆ ಇರಲಿದೆ. ಪ್ರತಿ ದಿನ ಮಧ್ಯಾಹ್ನ ೧೨-೨೦ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನವು ಮಧ್ಯಾಹ್ನ ೧-೨೫ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಮತ್ತೆ ೧.೫೫ಕ್ಕೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ಹೊರಟು ವಿಮಾನವು ೩ ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದೆ ಎಂದು ಸ್ಟಾರ್ ಏರ್ ಲೈನ್ಸ್ ವೆಬ್‌ಸೈಟ್ ಮೂಲಗಳಿಂದ ಗೊತ್ತಾಗಿದೆ. ಬೆಂಗಳೂರು- ಕಲಬುರ್ಗಿ ನಡುವಿನ ವಿಮಾನಯಾನ ದರವು ೨೮೫೦ರೂ.ಗಳಿಂದ ಪ್ರಾರಂಭವಾಗಲಿದೆ.
ಈ ಭಾಗದ ಜನರ ಹಾಗೂ ಉದ್ಯಮಿಗಳ ಬಹುದಿನಗಳ ಬೇಡಿಕೆಯಾದ ವಿಮಾನಯಾನ ಪ್ರಾರಂಭಕ್ಕೆ ಸಂಸದ ಡಾ. ಉಮೇಶ್ ಜಾಧವ್ ಅವರು ಮುತುವರ್ಜಿ ವಹಿಸಿ ಪಟ್ಟ ಶ್ರಮಕ್ಕೆ ಹಲವಾರು ಜನರು ಶ್ಲಾಘಿಸಿದ್ದಾರೆ. ಕೇವಲ ಕಲಬುರ್ಗಿ ನಗರದ ಜನತೆಯಲ್ಲದೇ ಯಾದಗಿರಿ, ರಾಯಚೂರು, ಕೊಪ್ಪಳ್, ವಿಜಯಪೂರ್, ಬೀದರ್, ತೆಲಂಗಾಣದ ಗಡಿಭಾಗವಾದ ತಾಂಡೂರ್, ಕೊಡಂಗಲ್, ಕೋಸಗಿ, ಜಹೀರಾಬಾದ್ ಜನರಿಗೂ ವಿಮಾನಯಾನ ಅನುಕೂಲವಾಗಲಿದೆ.
ಕಲಬುರಗಿ- ಬೆಂಗಳೂರು ವಿಮಾನಯಾನ ಸೇವೆಯ ಕುರಿತಂತೆ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹಲವಾರು ಜನರು ಟ್ವಿಟ್ ಮೂಲಕ ಶ್ಲಾಘಿಸಿದ್ದಾರೆ. ಆದಾಗ್ಯೂ, ಕೇಂದ್ರದ ಮಾಜಿ ಸಚಿವ ಡಾ. ಮಲ್ಲಿಕಾರ್ಜುನ್ ಖರ್ಗೆಯವರ ಬೆಂಬಲಿಗರು ನಿಮ್ಮದೇನು ಕೊಡುಗೆ? ಎಂದು ಸಂಸದ ಡಾ. ಉಮೇಶ್ ಜಾಧವ್ ಅವರನ್ನು ಪ್ರಶ್ನಿಸುವ ಮೂಲಕ ಕಾಲೆಳೆದಿದ್ದಾರೆ.