ಕಲಬುರಗಿ: ವಿಶ್ವಜ್ಯೋತಿ ಪ್ರತಿಷ್ಠಾನವು ನವೆಂಬರ್ ಮಾಸಾಂತ್ಯಕ್ಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಮಕ್ಕಳ ವಿವೇಕಕ್ಕೆ ಬೆಳಕು ನೀಡುವ ಮಕ್ಕಳ ವಿಕಾಸ ವೈಭವ-2019′ ದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಜಿಪಂನ ಮಾಜಿ ಉಪಾಧ್ಯಕ್ಷ ಸುರೇಶ ಆರ್.ಸಜ್ಜನ್ ಹಾಗೂ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಶರಣ ಚಿಂತಕ ಶರಣರಾಜ್ ಛಪ್ಪರಬಂದಿ ಅವರಿಗೆ ಅಧಿಕೃತವಾಗಿ ಆಹ್ವಾನ ನೀಡಿ, ಗೌರವಿಸಲಾಯಿತು.
ನಂತರ ಮಾತನಾಡಿದ ಸುರೇಶ ಸಜ್ಜನ್ ಹಾಗೂ ಶರಣರಾಜ್ ಛಪ್ಪರಬಂದಿ, ಇಂದಿನ ಮಗುವೇ ದೇಶದ ಕನಸು ಹಾಗೂ ಮುಂದಿನ ಭವಿಷ್ಯ ಎಂಬುದನ್ನು ನಾವು ಮನಗಾಣಬೇಕಾಗಿದೆ. ಮಗುವಿನ ಸರ್ವಾಂಗೀಣ ವಿಕಾಸವೇ ಶಿಕ್ಷಣದ ಗುರಿಯಾಗಿದೆ. ಮಗುವಿನಲ್ಲಿ ಅಡಗಿದ ಪ್ರತಿಭಾ ವೈವಿದ್ಯವನ್ನು ಪ್ರಕಾಶಿಸುವ ಕಾರ್ಯ ಈ ಮಕ್ಕಳ ವಿಕಾಸ ವೈಭವದಿಂದ ಆಗುತ್ತಿದೆ ಎಂದ ಅವರು, ಈ ನಿಟ್ಟಿನಲ್ಲಿ ವಿಶ್ವಜ್ಯೋತಿ ಪ್ರತಿಷ್ಠಾನದ ಸಂಸ್ಥಾಪಕ ವಿಜಯಕುಮಾರ ತೇಗಲತಿಪ್ಪಿ ಇಂಥ ಅನೇಕ ಜನಮುಖಿ ಕಾರ್ಯಗಳನ್ನು ಮಾಡಿ ಈ ಭಾಗದ ಜನರಿಂದ ಸೈ ಎನಿಸಿಕೊಂಡಿದ್ದಾರೆ ಎಂದು ಮನದುಂಬಿ ಮಾತನಾಡಿದರು.
ಪ್ರತಿಷ್ಠಾನದ ಸಂಸ್ಥಾಪಕರೂ ಆದ ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಎಳೆಯ ಮಕ್ಕಳಿಗೆ ಸಾಹಿತ್ಯ, ಸಾಂಸ್ಕೃತಿಕ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಮತ್ತು ಮಕ್ಕಳು ಕೇವಲ ಅಂಕ ಗಳಿಸಬೇಕೆಂಬ ಹಂಬಲದಿಂದ ಹೊರಗೆ ಬಂದು ತಮ್ಮಲ್ಲಿ ಹುದುಗಿರುವ ಪ್ರತಿಭೆ ಹೊರಹಾಕಲು ಈ ಮಕ್ಕಳ ವಿಕಾಸ ವೈಭವ ಉತ್ತಮ ವೇದಿಕೆ ನೀಡಲಿದೆ ಎಂದರು.
ಸಮಾಜದ ಹಿರಿಯ ಧುರೀಣ ಕಲ್ಯಾಣಪ್ಪ ಪಾಟೀಲ ಮಳಖೇಡ, ದಕ್ಷಿಣ ಕನ್ನಡ ಸಂಘದ ಪ್ರಮುಖ ನರಸಿಂಹ ಮೆಂಡನ್, ಪ್ರಮುಖರಾದ ವಿದ್ಯಾಸಾಗರ ದೇಶಮುಖ, ರವೀಂದ್ರಕುಮಾರ ಭಂಟನಳ್ಳಿ, ಶ್ರೀಕಾಂತ ಪಾಟೀಲ ತಿಳಗೂಳ, ಪರಮೇಶ್ವರ ಶಟಕಾರ, ಪ್ರಭುಲಿಂಗ ಮೂಲಗೆ, ಎಂ.ಬಿ.ನಿಂಗಪ್ಪ, ಡಾ.ಕೆ.ಗಿರಿಮಲ್ಲ, ಶಿವಾನಂದ ಮಠಪತಿ, ಮನೋಹರ ಪೊದ್ದಾರ, ಅಯ್ಯಣ್ಣಗೌಡ ಪಾಟೀಲ, ಮಹಾಂತೇಶ ಕಲಬುರಗಿ, ಶಿವಕುಮಾರ ಸಿ.ಹೊನಗೇರಾ, ಸತೀಶ ಸಜ್ಜನ್, ಸುಬ್ರಹ್ಮಣ್ಯಂ, ಶಿವರಾಜ ಅಂಡಗಿ, ವಿನೋದಕುಮಾರ ಜೇನವೇರಿ, ಡಾ.ನಾಗರಾಜ ಹೆಬ್ಬಾಳ ಸೇರಿ ಅನೇಕ ಗಣ್ಯರು ಉಪಸ್ಥಿತರಿದ್ದರು.