ಧರ್ಮ ರಾಜಕೀಯ ಹೋರಾಟ ಮಠಾಧೀಶರಿಗೆ ಸಲ್ಲದು: ಬಿಜೆಪಿ ನಾಯಕ ಬಿರಾದಾರ್

0
104

ಕಲಬುರಗಿ: ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕೀಯ ಇರಬಾರದು. ಆ ಹಿನ್ನೆಲೆಯಲ್ಲಿ ವೀರಶೈವ ಮಠಾಧೀಶರು ಧರ್ಮ ರಾಜಕೀಯಕ್ಕಾಗಿ ಹೋರಾಟ ಮಾಡುವ ಎಚ್ಚರಿಕೆಯನ್ನು ಕೈಬಿಡಬೇಕು ಎಂದು ಬಿಜೆಪಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯ ಸುಭಾಷ್ ಬಿರಾದಾರ್ ಕಮಲಾಪೂರ್ ಅವರು ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿಗಳು. ಅವರನ್ನು ರಾಜ್ಯದ ಜನತೆ ಆಯ್ಕೆಗೊಳಿಸಿದ್ದಾರೆ. ಯಾರನ್ನು ಮುಖ್ಯಮಂತ್ರಿ ಮಾಡಬೇಕು, ಬಿಡಬೇಕು ಎಂಬುದು ಮತದಾರರಿಗೆ ಬಿಟ್ಟ ವಿಷಯ. ಅದು ಪ್ರಜಾಸತ್ತಾತ್ಮಕ ತಳಹದಿಯ ಮೇಲೆ ಆಯ್ಕೆಯಾಗುವಂತಹ ಸಾಂವಿಧಾನಿಕ ಹುದ್ದೆ. ಆ ಹುದ್ದೆಯನ್ನು ಹಲವರು ತಪ್ಪಿಸುವ ಶಡ್ಯಂತ್ರ ಮಾಡಿದರೂ ಸಹ ಅದು ಫಲಿಸದು. ಹಾಗಾಗಿ ಯಡಿಯೂರಪ್ಪ ಅವರ ಪರ ವೀರಶೈವ ಮಠಾಧೀಶರು ಹೋರಾಟಕ್ಕೆ ಇಳಿದರೆ ಅದನ್ನೇ ಉಳಿದವರು ಅಪಾರ್ಥ ಮಾಡಿಕೊಂಡರೆ ಇಡೀ ಮಠಾಧೀಶರ ಗೌರವ ಹಾಗೂ ಘನತೆಗೆ ಚ್ಯುತಿ ಬರಲಿದೆ. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಹುದ್ದೆಗೂ ಸಹ ಅಪಚಾರ ಎಸಗಿದಂತಾಗುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಈ ಹಿಂದೆ ಅನೇಕ ಮಠಾಧೀಶರು ತಮ್ಮ ತಮ್ಮ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ಪರ ಪ್ರಚೋದನಾತ್ಮಕ ಹೇಳಿಕೆಯನ್ನು ನೀಡಿದ್ದುಂಟು. ಹಲವರು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಮನಬಂದಂತೆ ಟೀಕಿಸಿದ್ದರು. ಅಂತಹ ಮಠಾಧೀಶರ ಪರಿಸ್ಥಿತಿ ಈಗ ಏನಾಗಿದೆ ಎಂಬುದನ್ನು ವೀರಶೈವ ಮಠಾಧೀಶರು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೀರಶೈವ ಸಮಾಜದವರು ಎಂಬ ಹೆಮ್ಮೆ ಇರಲಿ. ಅದೇ ರೀತಿ ಉಳಿದ ಸಮುದಾಯದವರಿಗೂ ಸಹ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಕ್ಕೆ ಹೆಮ್ಮೆ ಇದೆ. ಅಂತಹ ಹೆಮ್ಮೆಯನ್ನು ಕೇವಲ ಒಂದೇ ಸಮಾಜಕ್ಕೆ ಸೀಮಿತಗೊಳಿಸಿದರೆ ಉಳಿದ ಸಮಾಜದವರು ಮಠಾಧೀಶರ ಕುರಿತು ಅಪನಂಬಿಕೆ ಹುಟ್ಟುವಂತಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದರೂ ಸಹ ಮುಖ್ಯಮಂತ್ರಿ ಸ್ಥಾನದಿಂದ ರಾಜಕೀಯ ಶಡ್ಯಂತ್ರದಿಂದ ಬಿ.ಎಸ್. ಯಡಿಯೂರಪ್ಪ ಅವರನ್ನು ಕೆಳಗಿಳಿಸಲಾಯಿತು. ಆದಾಗ್ಯೂ, ಅವರ ಶಡ್ಯಂತ್ರ ತಾತ್ಕಾಲಿಕವಾಗಿತ್ತು. ಹೀಗಾಗಿ ಕಾಂಗ್ರೆಸ್, ಜೆಡಿ(ಎಸ್) ಹಾಗೂ ಪಕ್ಷೇತರರು ಯಡಿಯೂರಪ್ಪ ಅವರ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಶಾಸಕ, ಸಚಿವ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಈಗ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ೧೭ ಅನರ್ಹ ಶಾಸಕರಲ್ಲಿ ಕೇವಲ ಇಬ್ಬರು ಮಾತ್ರ ವೀರಶೈವ ಸಮಾಜದವರು. ಉಳಿದವರು ಹಿಂದುಳಿದ ವರ್ಗಗಳಿಗೆ ಸೇರಿದವರಾಗಿದ್ದಾರೆ. ಹೀಗಾಗಿ ಮಠಾಧೀಶರು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿಸಲು ತ್ಯಾಗ ಮಾಡಿದ ಹಿಂದುಳಿದ ವರ್ಗಗಳ ಅನರ್ಹ ಶಾಸಕರ ಸಮುದಾಯಗಳಿಗೆ ನೋವು ಮಾಡಿದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ವೀರಶೈವ ಧರ್ಮಕ್ಕೆ ಜಾತ್ಯಾತೀತ ತತ್ವದ ಸಿದ್ಧಾಂತವಿದೆ. ಹಾಗಾಗಿ ಮಠಾಧೀಶರು ಕೇವಲ ರಾಜಕೀಯ ಅಧಿಕಾರಕ್ಕಾಗಿ ಒಂದು ಸಮುದಾಯ, ಒಬ್ಬ ವ್ಯಕ್ತಿ ಪರ ಹೋರಾಟ ಮಾಡುವುದು ಸರಿಯಲ್ಲ. ರಾಜಕೀಯದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕೀಯ ಇರಬಾರದು. ಅಂತಹ ಸಂಗತಿ ಮಠಾಧೀಶರಿಗೂ ಗೊತ್ತು. ಹಾಗಾಗಿ ಮಠಾಧೀಶರು ಧರ್ಮ ರಾಜಕೀಯದಲ್ಲಿ ತೊಡಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here