ಒಂದೇ ಮನೆಯಲ್ಲಿ ನಾಲ್ವರಿಗೆ ಡೆಂಘೀ: ವಾಡಿಯಲ್ಲಿ ಮುಂದುವರೆದ ಡೆಂಘೀ ಅಟ್ಟಹಾಸ: ಆತಂಕದಲ್ಲಿ ಜನರು

0
107

ವಾಡಿ: ಪಟ್ಟಣದ ನಿವಾಸಿಗಳಿಗೆ ಕಳೆದ ಒಂದು ತಿಂಗಳಿಂದ ಬಿಡದೇ ಕಾಡುತ್ತಿರುವ ಡೆಂಘೀ ಆತಂಕ ಮುಂದು ವರೆದಿದ್ದು, ಮತ್ತಷ್ಟು ಜನ ಯುವಕರು ಹಾಗೂ ಬಾಲಕರು ಡೆಂಘೀಯಿಂದ ನರಳುತ್ತಿರುವುದು ಬೆಳಕಿಗೆ ಬಂದಿದೆ.

ಪುರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿರುವವರ ಸಂಖ್ಯೆ ಬೆಳೆಯುತ್ತಿದ್ದು, ರಕ್ತ ಪರೀಕ್ಷೆಯಿಂದ ಹಲವರಲ್ಲಿ ಡೆಂಘೀ ಪತ್ತೆಯಾಗಿದೆ. ಇಲ್ಲಿನ ಅಂಬೇಡ್ಕರ್ ಕಾಲೋನಿಯ ನಿವಾಸಿ ದೊಡ್ಡೇಶ ಬಡಿಗೇರ ಎಂಬುವವರ ಮನೆಯಲ್ಲಿ ಧಮ್ಮಪ್ರಿಯ (17), ಅನುಪ್ರಿಯಾ (15), ಮಧುಪ್ರಿಯಾ (13), ವಿಶಾಲ (21) ಎಂಬ ನಾಲ್ವರು ಬಾಲಕರು ಶಂಕಿತ ಡೆಂಘೀ ಜ್ವರದಿಂದ ನರಳುತ್ತಿದ್ದು, ಸದ್ಯ ಸ್ಥಳೀಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ವಿವಿಧ ಬಡಾವಣೆಗಳಲ್ಲಿ ಹೀಗೆ ಶಂಕಿತ ಡೆಂಘೀಯಿಂದ ಹಾಸಿಗೆ ಹಿಡಿದವರ ಪಟ್ಟಿ ದೊಡ್ಡದಿದೆ. ಸಾಂಕ್ರಾಮಿಕ ರೋಗದಂತೆ ಹರಡುತ್ತಿರುವ ಡೆಂಘೀ ಜ್ವರದಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

Contact Your\'s Advertisement; 9902492681

ಡೆಂಘೀಯಿಂದ ಗುಣಮುಖರಾಗಲು ಕೆಲವರು ಸರಕಾರಿ ಆಸ್ಪತ್ರೆಗಳ ಮೊರೆ ಹೋದರೆ, ಇನ್ನು ಅನೇಕ ಜನರು ಕಲಬುರಗಿ, ಸೊಲ್ಲಾಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ತಿಂಗಳ ಹಿಂದೆಯಷ್ಟೇ ಬಾಲಕನೋರ್ವನ ಬಲಿ ಪಡೆದಿರುವ ಮಹಾಮಾರಿ ಈ ಡೆಂಘೀಗೆ ವಾಡಿ ಜನತೆ ಬೆಚ್ಚಿಬಿದ್ದಿದ್ದಾರೆ. ವೈರಲ್ ಫೀವರ್‍ಗೂ ಹೆದರುವಂತಾಗಿದೆ. ಆರಂಭದಲ್ಲಿ ಆರೋಗ್ಯ ಇಲಾಖೆಯಿಂದ ವಾಡಿಯಲ್ಲಿ ಒಟ್ಟು 6 ಡೆಂಘೀ ಪ್ರಕರಣ ಪತ್ತೆಯಾಗಿವೆ ಎಂದು ಪ್ರಕಟಿಸಲಾಗಿತ್ತು.

ನಂತರ ಲಾರ್ವಾ ಸರ್ವೆ ಮತ್ತು ಬಡಾವಣೆಯ ಜನರ ರಕ್ತದ ಮಾದರಿ ಪರೀಕ್ಷೆಯಿಂದ ಮತ್ತೆ 16 ಡೆಂಘೀ ಪ್ರಕರಣಗಳು ಬೆಳಕಿಗೆ ಬಂದಿರುವುದಾಗಿ ಸ್ಥಳೀಯ ಸರಕಾರಿ ಆಸ್ಪತ್ರೆಯ ಕಿರಿಯ ಆರೋಗ್ಯ ಸಹಾಯಕಿ ಅನಿತಾ ಪ್ರಕಟಿಸಿದ್ದರು. ಈಗ ಮತ್ತೆ 20ಕ್ಕೂ ಹೆಚ್ಚು ಶಂಕಿತ ಡೆಂಘೀ ಪ್ರಕರಣ ಖಾಸಗಿ ಪರೀಕ್ಷೆಯಿಂದ ಬಯಲಿಗೆ ಬಂದಿವೆ. ಬಿಯ್ಯಾಬಾನಿ ಏರಿಯಾ, ಬಿರ್ಲಾ ಏರಿಯಾ, ಅಂಬೇಡ್ಕರ್ ಕಾಲೋನಿ, ಮಹೆಬೂಬಸುಬಾನಿ ದರ್ಗಾ ಬಡಾವಣೆಗಳಲ್ಲಿಯೇ ಹೆಚ್ಚು ರೋಗಿಗಳು ಕಂಡುಬಂದಿದ್ದು, ಜ್ವರ ಮಾತ್ರ ಹತೋಟಿಗೆ ಬರುತ್ತಿಲ್ಲ ಎಂಬುದೇ ಜನರ ಆತಂಕಕ್ಕೆ ಕಾರಣವಾಗಿದೆ.

ಡೆಂಘೀ ಆತಂಕ ನಿವಾರಿಸಲು ಆರೋಗ್ಯ ಇಲಾಖೆಯಿಂದ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕಿಯರ ತಂಡಗಳನ್ನು ರಚಿಸಿ ವಿವಿಧ ಬಡಾವಣೆಗಳಲ್ಲಿ ಲಾರ್ವಾ ಸರ್ವೆ ನಡೆಸಲಾಗಿದೆ. ಜ್ವರ ಪೀಡಿತರ ರಕ್ತ ಮಾದರಿ ಪಡೆದು ಪರೀಕ್ಷೆಗೊಳಪಡಿಸುವ ಕಾರ್ಯ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿರಂತರವಾಗಿ ನಡೆಯುತ್ತಿದೆ.

ಖಾಸಗಿ ಲ್ಯಾಬ್‍ಗಳಲ್ಲಿ ನಡೆಸಲಾದ ರಕ್ತ ಪರೀಕ್ಷೆಯಿಂದ ಡೆಂಘೀ ರೀಯ್ಯಾಕ್ಟೀವ್ ಬಂದ ರೋಗಿಗಳನ್ನು ಪುನಹ ನಾವು ಸರಕಾರಿ ಜಿಲ್ಲಾಸ್ಪತ್ರೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಡೆಂಘೀ ನೆಗೆಟೀವ್ ಬಂದಿದೆ ಎಂಬುದು ಆರೋಗ್ಯ ಸಹಾಯಕಿಯರ ಹೇಳಿಕೆಯಾಗಿದ್ದು, ಜನರಲ್ಲಿ ಡೆಂಘೀ ಆತಂಕ ಹುಟ್ಟಿಸುವ ಮೂಲಕ ಹಣ ಸುಲಿಗೆಗೆ ನಿಂತಿರುವ ಖಾಸಗಿ ರಕ್ತ ಪರೀಕ್ಷಾ ಕೇಂದ್ರಗಳು ಮತ್ತು ಸ್ಥಳೀಯ ಖಾಸಗಿ ವೈದ್ಯರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಆರೋಗ್ಯ ಇಲಾಖೆ ಹಿಂದೇಟು ಹಾಕುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here