ವಾಡಿ: ವಿಶ್ವದ ಗಮನ ಸೆಳೆದಿರುವ ಸಾಮ್ರಾಟ್ ಅಶೋಕನ ಕಾಲದ್ದು ಎನ್ನಲಾದ ಸನ್ನತಿ ಐತಿಹಾಸಿಕ ಬೌದ್ಧ ಸ್ತೂಪ ನೆಲೆ ಅಭಿವೃದ್ಧಿ ಹೊಂದುವಲ್ಲಿ ಹಿನ್ನೆಡೆಯುಂಟಾಗಿರುವುದು ಜನಪ್ರತಿನಿಧಿಗಳು ಹಾಗೂ ಪ್ರಾಚ್ಯವಸ್ತು ಇಲಾಖೆ ಎಸಗಿರುವ ಅಕ್ಷಮ್ಯ ಅಪರಾಧ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ರಾಜ್ಯಾಧ್ಯಕ್ಷ ಎಸ್.ಎನ್.ಸ್ವಾಮಿ ದೂರಿದ್ದಾರೆ.
ಸೋಮವಾರ ಸನ್ನತಿ ಬೌದ್ಧ ಸ್ತೂಪ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಬುದ್ಧನ ಮೂರ್ತಿಗಳ ದುಸ್ಥಿತಿ ಹಾಗೂ ಅಸುರಕ್ಷತೆಯ ಬೌದ್ಧ ಸ್ತೂಪ ಸ್ಥಳ ವೀಕ್ಷಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎನ್.ಸ್ವಾಮಿ, ಇತಿಹಾಸ ತಜ್ಞರ ಪ್ರಕಾರ ಸಾಮ್ರಾಟ್ ಅಶೊಕನ ಪ್ರತಿಮೆ ಪತ್ತೆಯಾಗಿರುವುದು ಸನ್ನತಿಯಲ್ಲಿ ಮಾತ್ರ. ಬುದ್ಧ ಮತ್ತು ಅಶೋಕನ ಇತಿಹಾಸ ನೆನಪಿಸುವ ಅಪರೂಪದ ಶಿಲ್ಪ ಕಲಾಕೃತಿಗಳನ್ನು ಸರಕಾರ ಅನಾಥ ಶವಗಳಂತೆ ಬಯಲಿಗಿಟ್ಟಿದೆ. ಶವಗಳ ಶೆಡ್‌ಗಿಂತಲೂ ಕನಿಷ್ಟವಾದ ಪತ್ರಾಸ್‌ಗಳ ಆಸರೆಯಲ್ಲಿಟ್ಟಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಸ್ತು ಸಂಗ್ರಹಾಲಯ ಉದ್ಘಾಟನೆಗೊಂಡು ಮೂರ್ತಿಗಳ ಸಂರಕ್ಷಣೆಗೆ ಮುಂದಾಗಬೇಕು. ಸನ್ನತಿ ಸ್ಥಳದ ಪ್ರಾಮುಖ್ಯತೆಯನ್ನು ಜನರಿಗೆ ತಿಳುಸುವ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು ಎಂದು ಒತ್ತಾಯಿಸಿದರು.
ಸನ್ನತಿ ಬೌದ್ಧ ನೆಲೆಯು ಮೌರ್ಯ ಸಾಮ್ರಾಜ್ಯದ ಧೊರೆ ಸಾಮ್ರಾಟ್ ಅಶೋಕನ ಕಾಲಗಟ್ಟದ ಇತಿಹಾಸ ಹೇಳುವ ಜತೆಗೆ ಕ್ರಿ.ಪೂ ೩ನೇ ಶತಮಾನದ ಅಮೂಲ್ಯವಾದ ಶಿಲ್ಪಕಲಾ ಪರಂಪರೆಯನ್ನು ತಿಳಿಸುತ್ತದೆ. ಸನ್ನತಿಯ ಬೌದ್ಧ ಸ್ಥಳ ಉತ್ಖನನ ನಡೆದು ಎರಡು ದಶಕಗಳು ಕಳೆದಿವೆ. ಇನ್ನೂ ಈ ಸ್ಥಳ ಅಭಿವೃದ್ಧಿಯಾಗಿಲ್ಲ ಎಂದರೆ ಈ ಭಾಗದಲ್ಲಿ ಇತಿಹಾಸದ ಪ್ರಜ್ಞೆ ಎಷ್ಟಿದೆ ಎಂಬುದು ಅರ್ಥವಾಗುತ್ತದೆ. ಸೂಕ್ತ ಸಂರಕ್ಷಣೆ ಕೊರತೆಯಿಂದ ಈಗಾಗಲೇ ನಮ್ಮ ಎಷ್ಟೋ ಸ್ಮಾರಕಗಳ ಇತಿಹಾಸ ಮುಚ್ಚಿಹೋಗಿವೆ. ದೇವಸ್ಥಾನಗಳ ಬಿತ್ತಿ ಚಿತ್ರಗಳಿಗೆ ಸುಣ್ಣ ಬಣ್ಣ ಬಳಿದು ಹಾಳು ಮಾಡಲಾಗುತ್ತಿದೆ. ಇತಿಹಾಸದ ದೃಷ್ಠಿಯಿಂದ ಇವು ಅಪರಾಧ ಕೃತ್ಯಗಳಾಗಿವೆ. ನಮ್ಮ ದೇಶದ ಇತಿಹಾವನ್ನು ಕಟ್ಟುವುದು ಬಹಳ ಪ್ರಾಯಾಸವಾದ ಕೆಲಸ. ಇಂತಹ ಸಂದರ್ಭದಲ್ಲಿ ಸಿಕ್ಕಿರುವ ಇತಿಹಾಸದ ಪುರಾವೆಗಳನ್ನು ಸಾಕ್ಷ್ಯಗಳನ್ನು ನಾವು ಕಾಪಾಡಿಕೊಳದಿದ್ದರೆ ದೇಶಾಭಿಮಾನಕ್ಕೆ ಅರ್ಥವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿನ್ನವಾದ ಮೂರ್ತಿ ಪೂಜೆಗೆ ಅರ್ಹವಲ್ಲ ಎಂಬ ಕಾರಣಕ್ಕೆ ಸಾವಿರಾರು ವರ್ಷಗಳ ಇತಿಹಾಸ ಹೇಳುವ ಶಿಲಾಮೂರ್ತಿಯನ್ನು ಚಂದ್ರಲಾಂಬಿಕೆ ದೇವಸ್ಥಾನದ ತಿಪ್ಪೆಗುಂಡಿಗೆ ಎಸೆದಿರುವುದು ನೋಡಿ ಬೇಸರವಾಯಿತು. ಬದಲಿಗೆ ಕಲೆ ದೃಷ್ಠಿಯಿಂದ ಆ ಶಿಲಾಮೂರ್ತಿಯನ್ನು ಜಿಲ್ಲಾ ಪ್ರಾಚ್ಯವಸ್ತು ಇಲಾಖೆ ಸಂಗ್ರಹ ಮಾಡಬೇಕಿತ್ತು. ಇತಿಹಾಸ ಮಾರ್ಗದರ್ಶಕರ ನೇಮಕವಾಗಬೇಕಿತ್ತು. ದೇಶ ವಿದೇಶದಿಂದ ಬರುವ ಪ್ರವಾಸಿಗರಿಗಾಗಿ ಇಲ್ಲಿ ಕುಡಿಯುವ ನೀರು, ಶೌಚಾಲಯ, ಉದ್ಯಾನವನ ಸೌಲಭ್ಯ ಇಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು. ಸನ್ನತಿ ಚಂದ್ರಲಾಂಬಿಕೆ ದೇವಸ್ಥಾನದ ಪರಿಸರದಲ್ಲಿ ದೊರೆತ ಸನ್ನತಿ ಬೌದ್ಧ ನೆಲೆಯ ಇತಿಹಾಸ ಹೇಳುವ ಶಾಸನ ಹಲವು ಕೌತುಗಳನ್ನು ಬಿಚ್ಚಿಡುವ ಸಾಧ್ಯತೆಯಿದೆ. ಈ ಕುರಿತು ಇನ್ನಷ್ಟು ಸಂಶೋಧನೆಗಳಾಗಬೇಕು. ಬೌದ್ಧ ಸ್ತೂಪ ಸ್ಥಳ ಪ್ರವಾಸಿ ತಾಣವಾಗಿ ಅಭಿವೃದ್ಧಿ ಹೊಂದಬೇಕು. ಅಳಿದುಳಿದ ಪುರಾತತ್ವ ಪಳಯುಳಿಕೆಗಳನ್ನು ರಕ್ಷಿಸಲು ಈ ಭಾಗದ ರಾಜಕಾರಣಿಗಳು ಮತ್ತು ಸರಕಾರ ಹೆಚ್ಚು ಆಸಕ್ತಿ ತೋರಬೇಕು ಎಂದು ಪ್ರತಿಕ್ರೀಯಿಸಿದರು.
ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಮಹೇಶ ಎಸ್.ಜಿ, ಪುಟ್ಟರಾಜ ಲಿಂಗಶೆಟ್ಟಿ, ಕೆ.ಬಸವರಾಜ, ಎ.ಅಶ್ವಿನಿ, ಲಿಂಗಣ್ಣ ಜಂಬಗಿ, ಮಲ್ಲಿನಾಥ ಹುಂಡೇಕಲ, ಜಿ.ರಾಧಾ ಇದ್ದರು.
ಸಂಬಂದಿಸಿದ ಪುರಾತತ್ವ ಇಲಾಖೆಯ ಅಧಿಕಾರಿಗಳು ಮತ್ತು ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.