ಕಲಬುರಗಿ: ಜಿಲ್ಲೆಯ ಸೇಡಂ ಪಟ್ಟಣದ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ (ರಿ) ವತಿಯಿಂದ ಕೊಡಮಾಡುವ ರಾಜ್ಯ ಮಟ್ಟದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಲನಚಿತ್ರ ಸಂಗೀತ ನಿರ್ದೇಶಕ ವಿ.ಮನೋಹರ ಭಾಗವಹಿಸುವರು.
೧೯ ನೇ ವರ್ಷದ ಅಮ್ಮ ಪ್ರಶಸ್ತಿ ಪ್ರದಾನ ಸಮಾರಂಭವು ನ.೨೬ ರಂದು ಸಂಜೆ ೫.೩೦ ಕ್ಕೆ ಸೇಡಂ ಪಟ್ಟಣದ ಐತಿಹಾಸಿಕ ಶ್ರೀ ಪಂಚಲಿಂಗೇಶ್ವರ ದೇವಾಲಯದ ಆವರಣದಲ್ಲಿರುವ ಶಾಂಭವಿ ರಂಗಮಂಟಪದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಲಿದ್ದಾರೆ ಎಂದು ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಆರು ಜನ ಲೇಖಕರಿಗೆ ತಲಾ ೫೦೦೦ ರು. ನಗದು ಪುರಸ್ಕಾರದ ‘ಅಮ್ಮ ಪ್ರಶಸ್ತಿ’ ಮತ್ತು ವಿವಿಧ ಕ್ಷೇತ್ರಗಳ ಐವರು ಸಾಧಕರಿಗೆ ‘ಅಮ್ಮ ಗೌರವ’ ಪುರಸ್ಕಾರ ನೀಡಿ ಗೌರವಿಸಲಾಗುವುದು. ಗೌರವ ಪತ್ರ, ಮೊಮೆಂಟೊ ಮತ್ತು ಪ್ರತಿಯೊಬ್ಬರಿಗೂ ಈ ಭಾಗದ ಜೀವಧಾನ್ಯ ಆಗಿರುವ ತೊಗರಿ ಬೇಳೆ ನೀಡಿ ಸತ್ಕರಿಸಲಾಗುವುದು. ಇದೇ ಸಂದರ್ಭದಲ್ಲಿ ನಿವೃತ್ತ ಮೇಷ್ಟ್ರು ನಾಗಪ್ಪ ಮುನ್ನೂರ್ ಅವರ ಸ್ಮರಣಾರ್ಥ ಇಬ್ಬರು ಹೆಣ್ಣು ಮಕ್ಕಳಿಗೆ ಸ್ವಾವಲಂಬಿ ಜೀವನ ನಡೆಸುವುದಕ್ಕಾಗಿ ಹೊಲಿಗೆ ಮಷಿನ್ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.