ಸುರಪುರ: ಕನಕ ಗುರುಪೀಠದ ಶ್ರೀಗಳಿಗೆ ಸಚಿವ ಮಾಧುಸ್ವಾಮಿ ಧಮಕಿ ಹಾಕಿ ಉದ್ಧಟತನ ತೋರಿದ್ದು ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಗನಗೌಡ ಪಾಟೀಲ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕುರುಬ ಸಮಾಜದ ಹೊಸದುರ್ಗ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿಗಳಿಗೆ ರಾಜ್ಯದ ಕಾನೂನು ಸಚಿವ ಮಾಧುಸ್ವಾಮಿ ಶಾಂತಿ ಸಭೆಯೊಂದರಲ್ಲಿ ವಾಚಾಮಗೋಚರವಾಗಿ ಮಾತನಾಡಿ ಕೈಬೆರಳನ್ನು ತೋರಿಸುತ್ತಾ ಧಮಕಿ ಹಾಕಿ ಅಗೌರವ ಸೂಚಿಸಿದ್ದು,ಇದರಿಂದ ಶ್ರೀಮಠದ ಪರಂಪರೆಗೆ ಹಾಗೂ ಸಮಾಜದ ಭಕ್ತರಿಗೆ ತೀವ್ರ ನೋವುಂಟಾಗಿದೆ.ಸಚಿವರು ಈ ಕೂಡಲೇ ನಾಡಿನ ಜನರ ಕ್ಷಮೆಯಾಚಿಸಬೇಕೆಂದು ಅಖಿಲ ಕರ್ನಾಟಕ ಯುವ ಕುರುಬರ ಒಕ್ಕೂಟ ಆಗ್ರಹಿಸುತ್ತದೆ ಎಂದರು.
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರ್ ಪಟ್ಟಣದ ವ್ಯಾಪ್ತಿಯಲ್ಲಿರುವ ಅಲ್ಲಿನ ವೃತ್ತಕ್ಕೆ ಕನಕದಾಸ ವೃತ್ತ ಎಂದು 2006ರಲ್ಲಿ ಗ್ರಾಮಪಂಚಾಯಿತಿಯಿಂದ ಸ್ಥಾಪಿತಗೊಂಡು ಇತ್ತೀಚೆಗೆ ವೃತ್ತದ ಅಗಲೀಕರಣ ಸಂದರ್ಭದಲ್ಲಿ ಆ ವೃತ್ತಕ್ಕೆ ಪರಮಪೂಜ್ಯ ನಡೆದಾಡುವ ದೇವರು ಲಿಂ:ಡಾ:ಶಿವಕುಮಾರ ಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡಬೇಕೆಂದು ಕೆಲವರು ಮನವಿ ಮಾಡಿಕೊಂಡಿದ್ದರಿಂದ ಈ ಸಂದರ್ಭದಲ್ಲಿ ಜಿಲ್ಲಾ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಸ್ವಾಮೀಜಿಗಳ ಸಾರ್ವಜನಿಕರೊಂದಿಗಿನ ಶಾಂತಿಸಭೆಯಲ್ಲಿ ಸಚಿವ ಮಾಧುಸ್ವಾಮಿಯವರು ರಾಜಕೀಯ ಪ್ರೇರಿತವಾಗಿ ಜಾತಿ-ಜಾತಿಗಳ ನಡುವೆ ಒಡಕನ್ನು ಮೂಡಿಸಿದ್ದಲ್ಲದೆ, ಸ್ವಾಮೀಜಿಗಳು ಕನಕದಾಸರ ವೃತ್ತಕ್ಕೆ ಕನಕದಾಸ ವೃತ್ತವೆಂದೇ ಹಾಗೂ ಬೇರೊಂದು ವೃತ್ತಕ್ಕೆ ಪೂಜ್ಯ ದಿ:ಶಿವಕುಮಾರಸ್ವಾಮೀಜಿ ವೃತ್ತ ಎಂದು ನಾಮಕರಣ ಮಾಡೋಣ ಎಂದಿದ್ದಕ್ಕೆ, ಸಚಿವ ಮಾಧುಸ್ವಾಮಿ ಏರುಧ್ವನಿಯಲ್ಲಿ ಕೈಬೆರಳು ತೋರಿಸುತ್ತಾ ಧಮಕಿ ಹಾಕಿ ಉದ್ದಟತನವನ್ನು ಸಾರ್ವಜನಿಕರೆದುರಲ್ಲೇ ವಾಗ್ವಾದ ಮಾಡಿದ್ದು ತೀವ್ರ ಖಂಡನೀಯ.
ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸಚಿವರಾದವರ ಬಾಯಲ್ಲಿ ಜಾತಿ-ಜಾತಿಗಳ ಮಧ್ಯೆ ವಿಷಬೀಜ ಭಿತ್ತಿರುವುದು ಅಕ್ಷಮ್ಯ. ಸಂಸ್ಕಾರ ಸಂಸ್ಕೃತಿ ನಮ್ಮ ಉಸಿರು ಎನ್ನುವ ನೀವು ಇದೇನಾ ನಿಮ್ಮ ಸಂಸ್ಕಾರ, ಸಂಸ್ಕೃತಿ? ಎಂದು ಪ್ರಶ್ನಿಸಿದ್ದಾರೆ.
ಮಾಧುಸ್ವಾಮಿ ಈ ಕೂಡಲೇ ಶ್ರೀಗಳಿಗೆ ಕ್ಷಮೆಯಾಚಿಸಬೇಕು ಹಾಗೂ ಇಂತಹ ಮಂತ್ರಿಗಳನ್ನು ಸಚಿವ ಸಂಪುಟದಿಂದ ಕೈಬಿಡಬೇಕು, ಇಲ್ಲದಿದ್ದಲ್ಲಿ ರಾಜ್ಯವ್ಯಾಪ್ತಿ ಉಗ್ರ ಪ್ರತಿಭಟನೆ ಮೂಲಕ ಪ್ರಟಿಭಟಿಸಬೇಕಾಗುತ್ತದೆ. ಮುಂದೆ ಆಗುವ ಅನಾಹುತಗಳಿಗೆ ರಾಜ್ಯ ಸರಕಾರವೇ ಹೊಣೆಯಾಗಲಿದೆ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.