ರಾಯಚೂರು: JNU ನಲ್ಲಿ ಹೆಚ್ಚಿಸಿರುವ ಶುಲ್ಕವನ್ನು ವಿರೋಧಿಸಿ ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಕೇಂದ್ರ ಸರಕಾರದ ದೌರ್ಜನ್ಯ ಖಂಡಿಸಿ SFI ವತಿಯಿಂದ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಮಾತನಾಡಿ ದೆಹಲಿಯ ಜವಾಹರಲಲ್ ನೆಹರು ವಿಶ್ವವಿದ್ಯಾಲಯವು ದೇಶದ ಹಳೆಯದಾದ ಹಾಗೂ ಹೆಸರುವಾಸಿಯಾದ ವಿಶ್ವವಿದ್ಯಾಲಯವಾಗಿದೆ. ಕಡಿಮೆ ದರದಲ್ಲಿ ಓದಬಹುದಾದ ಏಕೈಕ ವಿಶ್ವವಿದ್ಯಾಲಯ ಇದಾಗಿದೆ. ಆದರೆ ಕಳೆದ ಐದು ವರ್ಷಗಳಿಂದ ಕೇಂದ್ರ ಸರಕಾರದ ಹಸ್ತಕ್ಷೇಪ ಹೆಚ್ಚಾದ ಕಾರಣ ಇಲ್ಲಿಯ ಕಲಿಕೆಯ ವಾತಾವರಣವನ್ನೆ ಹದಗೆಡಿಸಲು ಹುನ್ನಾರ ನಡೆಸುತ್ತಲೇ ಬಂದಿದೆ. ಇತ್ತಿಚೆಗೆ ಕೇಂದ್ರ ಸರಕಾರ ಏಕಾ ಏಕಿ ಶುಲ್ಕವನ್ನು ಹೆಚ್ಚಳ ಮಾಡಲು ಮುಂದಾಗಿದ್ದನ್ನು ವಿರೋಧಿಸಿ ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾಗ, ಕೇಂದ್ರ ಸರಕಾರ ಪೊಲೀಸ್ ಮತ್ತು ಸೈನ್ಯದ ಬಲವನ್ನು ಬಳಸಿ ವಿದ್ಯಾರ್ಥಿಗಳ ಮೇಲೆ ಜಲ ಫಿರಂಗಿ, ಲಾಠಿಚಾರ್ಜ ಇತ್ಯಾದಿ ಮಾಡಿ ನೂರಾರು ವಿದ್ಯಾರ್ಥಿ ಮುಖಂಡರನ್ನು ಬಂಧಿಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಕೇಂದ್ರ ಸರಕಾರದ ಈ ನಡೆಯನ್ನು SFI ರಾಯಚೂರು ಜಿಲ್ಲಾ ಸಮಿತಿ ಹಾಗೂ ಇತರ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ ಎಂದು ತಿಳಿಸಿದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಪಾಯಗಳ ಕುರಿತು ಶಿಕ್ಷಣ ತಜ್ಞರು, ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಹೇಳುತ್ತಲೇ ಬಂದಿವೆಯಾದರೂ, ಕೇಂದ್ರ ಸರಕಾರ ಕೇಳುವ ಸೌಜನ್ಯ ತೋರಿಸಲೇ ಅಲ್ಲ. ಜೆ.ಎನ್.ಯು ನಲ್ಲಿ ದಿನಂಪ್ರತಿ ದೇಶದ ಆಗು ಹೋಗುಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಸರಕಾರದ ಶಿಕ್ಷಣ ವಿರೋಧಿ ನೀತಿಗಳು ಹಾಗೂ ಸಮಾಜದ ಜ್ವಲಂತ ಸಮಸ್ಯೆಗಳ ವಿರುದ್ಧ ಇಲ್ಲಿಯ ವಿದ್ಯಾರ್ಥಿಗಳು ವ್ಯಾಪಕವಾಗಿ ಪ್ರತಿಭಟನೆ ನಡೆಸುತ್ತಾರೆ.
ಇದನ್ನೆ ಗುರಿಯಾಗಿಸಿ ಕೇಂದ್ರ ಸರಕಾರ ಜೆ, ಎನ್,ಯು ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಕಡಿಮೆ ದರದಲ್ಲಿ ಸಿಗುತ್ತಿದ್ದ ಹಾಸ್ಟೇಲ್ ಊಟದ ದರವನ್ನು ಹೆಚಿಸಲಾಗಿದೆ. ವಿಶೇಷ ಶುಲ್ಕವಾಗಿ 1700, ರೂಮ್ ಬಾಡಿಗೆಗಾಗಿ 600 ಹೆಚ್ಚಳ ಮಾಡಲಾಗಿದೆ. ಈ ಮುಂಚೆ ಮಾಸಿಕವಾಗಿ 2646 ರೂ ಗೆ ಸಿಗುತ್ತಿದ್ದ ಹಾಸ್ಟೇಲ್ ಸೌಲಭ್ಯವನ್ನು 6600 ಗೆ ಹೆಚ್ಚಿಸಲಾಗಿದೆ. ಅಲ್ಲಿರುವ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಸಹಾಯದನ ಎಂಸಿ.ಎ 2000, ಎಂಫಿಲ್ 5000, ಸಂಶೋಧನಾ ವಿದ್ಯಾರ್ಥಿಗಳಿಗೆ 8000 ಸಿಗುತ್ತಿದೆ. ಹಾಸ್ಟೆಲ್ ಶುಲ್ಕ ಕಟ್ಟಲು ಈ ವಿದ್ಯಾರ್ಥಿ ವೇತನ ಸಾಕಾಗುವುದಿಲ್ಲ. ಪುಸ್ತಕ ಖರೀದಿಸಲು ಅಥವಾ ಕಾರ್ಯಕ್ಷೇತ್ರಕ್ಕೆ ತೆರಳಲು ವಿದ್ಯಾರ್ಥಿಗಳಿಗೆ ಹಣ ಸಾಕಾಗುವುದಿಲ್ಲ ಎಂದು ಆರೋಪಿಸಿದರು.
ಜೆಎನ್‍ಯು ನ ಶುಲ್ಕ ಹೆಚ್ಚಳ ಮಾಡಬೇಡಿ ಎಂದು ವಿದ್ಯಾರ್ಥಿಗಳು ಕೇಳಿದರೆ ಟ್ಯಾಕ್ಸ್ ಹಣದ ಬಳಕೆ ಬಗ್ಗೆ ಕೇಂದ್ರ ಸರಕಾರ ಮಾತನಾಡುತ್ತದೆ. ಆದರೆ ದೊಡ್ಡ ದೊಡ್ಡ ಉದ್ಯಮಿಗಳಿಗೆ, ಕಾರ್ಪೋರೇಟ್ ಕಂಪನಿಗಳಿಗೆ 12 ಲಕ್ಷ ರೂ ತೆರೆಗೆ ಮತ್ತು ಸಾಲ ಮನ್ನಾ ಮಾಡಲಾಗಿದೆ. ಪ್ರಧಾನಿಯವರು 92 ದೇಶಗಳನ್ನು ಸುತ್ತಿ 2021 ಕೋಟಿ ರೂ ಹಣ ಖರ್ಚು ಮಾಡಿದ್ದಾರೆ. ಈ ವೇಳೆ ಇವರಿಗ್ಯಾರಿಗೂ ಟ್ಯಾಕ್ಸ್ ನೆನಪಿಗೆ ಬರಲೇ ಇಲ್ಲ. ಹಾಗಾಗಿ ಕೇಂದ್ರ ಸರಕಾರ ಬೂಟಾಟಿಕೆ ಕೆಲಸಗಳನ್ನು ನಿಲ್ಲಿಸಬೇಕು. ಜೆಎನ್‍ಯು ನ ಹೆಚ್ಚಿಸಿರುವ ಶುಲ್ಕವನ್ನು ವಾಪಸ್ಸು ಪಡೆದು ಮೊದಲಿದ್ದ ಶುಲ್ಕವನ್ನೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.
ಬಂಧಿಸಿರುವ ವಿದಾರ್ಥಿಗಳನ್ನು ಬಿಡುಗಡೆ ಮಾಡಿ ಅವರ ಮೇಲೆ ದಾಖಲು ಮಾಡಿರುವ ಪ್ರಕರಣವನ್ನು ಹಿಂಪಡೆಯಬೇಕು ಹಾಗೂ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ದಮನವನ್ನು ನಿಲ್ಲಿಸಬೇಕು ಇಲ್ಲವಾದಲ್ಲಿ ವಿದ್ಯಾರ್ಥಿಗಳು ರಾಷ್ಟ್ರವ್ಯಾಪಿ ಹೋರಾಟವನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಪ್ರತಿಭಟನೆ ಮೂಲಕ ಎಚ್ಚರಿಸಿದರು. ಹೋರಾಟದ ಮನವಿಯನ್ನು ಜಿಲ್ಲಾಧಿಕಾರಿ ಗಳ ಮೂಲಕ ರಾಷ್ಟ್ರಪತಿಯರಿಗೆ ಕಳುಹಿಸಿಕೊಟ್ಟರು.
ಈ ಸಂಧರ್ಭದಲ್ಲಿ SFI ಸಹ ಕಾರ್ಯದರ್ಶಿ ಬಸವರಾಜ ದೀನಸಮುದ್ರ, ಮುಖಂಡರಾದ ಚಿದಾನಂದ ಕರಿಗೂಳಿ, ಜಿ. ಶಿವಮೂರ್ತಿ, KVS ನ ಜಿಲ್ಲಾ ಸಂಚಾಲಕರಾದ ಲಕ್ಷ್ಮಣ್ ಮಂಡಲಗೇರಾ, ಮಿಥುನ್ ರಾಜ್, ವಿ.ಕೆ ಬಲೀದ್, K.G ವಿರೇಶ, ಶರಣಬಸವ, ಮರಿಲಿಂಗ, ವೆಂಕಟೇಶ ಸೇರಿದಂತೆ ಇತರ ಸಂಘಟನೆಗಳ ಮುಖಂಡರು ಸೇರಿ ಅನೇಕರಿದ್ದರು.