ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಜಗದೀಶ್ ಶೆಟ್ಟರ್

0
29

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶವು ಹಿಂದುಳಿದ ಭಾಗವಾಗಿದ್ದು. ಈ ಭಾಗದ ಆರ್ಥಿಕ ಪ್ರಗತಿಗೆ ಆಹಾರ ಮತ್ತು ಕೃಷಿ ಕೈಗಾರಿಕೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶುಕ್ರವಾರ ನಗರದ ಎಚ್.ಕೆ.ಸಿ.ಸಿ.ಐ. ಸಭಾಂಗಣದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಷಿಯೇಸನ್ ಮತ್ತು ಗುಲಬರ್ಗಾ ಕೈಗಾರಿಕಾ ಪ್ರದೇಶ ಉತ್ಪಾದಕರ ಸಂಘ, ಗುಲಬರ್ಗಾ ಕೈಗಾರಿಕಾ ಮ್ಯಾನುಫ್ಯಾಕ್ಚರ‍್ಸ್ ಅಸೋಷಿಯೇಷನ್ಸ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿದ ರಫ್ತು, ವಿದೇಶ ವ್ಯಾಪಾರ ನೀತಿ ಮತ್ತು ಕಾರ್ಯವಿಧಾನಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮದ ಸಂವಾದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಕೈಗಾರಿಕಾ ಅಭಿವೃದ್ಧಿಗಾಗಿ ಹಾಗೂ ಕಂದಾಯ ವಸೂಲಿಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಕೈಗಾರಿಗಳ ಉನ್ನತಿಗೆ ಹೆಚ್ಚಿನ ಸೌಲಭ್ಯ ನೀಡುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ಜಾರಿಗೊಳಿಸಲಾಗುತ್ತದೆ. ಕೈಗಾರಿಕೆ ಕಟ್ಟಡಗಳ ಬಾಡಿಗೆ ಹಾಗೂ ಮಾರಾಟಕ್ಕೆ ಮತ್ತು ಕಂದಾಯ ವಸೂಲಿಗೆ ಸಂಬಂಧಿಸಿದಂತೆ ವೈಜ್ಞಾನಿಕ ದರ ನಿಗದಿ ಮಾಡುವ ಮೂಲಕ ಹಾಗೂ ಎಲ್ಲಾ ಕೈಗಾರಿಗಳ ಉನ್ನತಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲು ಶ್ರಮಿಸುವುದಾಗಿ ತಿಳಿಸಿದರು.
ಬೆಂಗಳೂರನ್ನು ಹೊರತುಪಡಿಸಿ ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹೊಸ ಕೈಗಾರಿಕಾ ನೀತಿಯಲ್ಲಿ ಸೇರಿಸಲಾಗುವುದು. ಕೈಗಾರಿಕಾ ಸಂಸ್ಥೆಯವರು ಸಲ್ಲಿಸಿರುವ ಮನವಿ ಪತ್ರಗಳನ್ನು ಪರಿಶೀಲಿಸಿ ಪ್ರಾಮಾಣಿಕ ಈಡೇರಿಕೆಗೆ ಪ್ರಯತ್ನಿಸುತ್ತೇನೆ ಎಂದು ಸಚಿವ ಜಗದೀಶ ಶೆಟ್ಟರ್ ಭರವಸೆ ನೀಡಿದರು.

ಇಂದು ಕಲಬುರಗಿಯಲ್ಲಿ ವಿಮಾನ ನಿಲ್ದಾಣ ಉದ್ಘಾಟನೆಯಾಗಿದ್ದು, ಮುಂದಿನ ದಿನಗಳಲ್ಲಿ ಕಲಬುರಗಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳು ಆರ್ಥಿಕವಾಗಿ ಸದೃಢವಾಗಲಿದೆ. ಇಲ್ಲಿನ ಕಪನೂರು ಕೈಗಾರಿಕಾ ಪ್ರದೇಶಕ್ಕೆ ತಾವು ಭೇಟಿ ನೀಡಿದ್ದು, ಅಲ್ಲಿನ ಕೈಗಾರಿಕೆಗಳ ಅಭಿವೃದ್ಧಿಗೆ ಮಾರಕವಾಗಿರುವ ರಸ್ತೆಗಳನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಕೆ.ಐ.ಎ.ಡಿ.ಬಿ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ಸದಸ್ಯ ಹೆಚ್. ಬಸವರಾಜೇಂದ್ರ, ಕೆ.ಎಸ್.ಎಸ್.ಐ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಬಿ. ಶಿರೂರ್, ಹೆಚ್.ಕೆ.ಸಿ.ಸಿ.ಐ. ಅಧ್ಯಕ್ಷ ಅಮರನಾಥ ಪಾಟೀಲ್, ಜಿಲ್ಲಾ ಕೈಗಾರಿಕೆ ಕೇಂದ್ರದ ಜಂಟಿ ನಿರ್ದೇಶಕ ಮಾಣಿಕ ವಿ. ರಘೋಜಿ, ಕೆ.ಎ.ಎಸ್.ಎಸ್.ಐ.ಎ ಅಧ್ಯಕ್ಷ ರಾಜು ಆರ್. ಸೇರಿದಂತೆ ಕೈಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು, ಕೈಗಾರಿಕಾ ಸಂಸ್ಥೆಯ ಮಾಲೀಕರು ಹಾಗೂ ಉದ್ದಿಮೆದಾರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here