ಕಲಬುರಗಿ: ಇಂದಿನ ಯುವಕರ ಮನಸ್ಸನ್ನು ಸಮಾಜಮುಖಿ ಚಿಂತನೆಯತ್ತ ತಿರುಗಲು ಹನ್ನೇರಡನೆ ಶತಮಾನದ ಬಸವಾದಿ ಶರಣರ ವಚನಗಳಲ್ಲಿನ ತಿರುಳನ್ನು ಅವರ ಮನಕ್ಕೆ ಮುಟ್ಟಿಸುವ ಅವಶ್ಯಕತೆವಿದೆ. ತಾಂತ್ರಿಕ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ವಚನ ಅಭಿಯಾನ ಹಮ್ಮಿಕೊಳ್ಳುತ್ತಿರುವುದು ವಿನೂತನ ಹಾಗೂ ವಿಶಿಷ್ಟ ಪ್ರಯೋಗವಾಗಿದೆ ಎಂದು ನಾಡಿನ ಹಿರಿಯ ಶರಣ ಸಾಹಿತಿ ಡಾ. ಗೋ ರು ಚೆನ್ನಬಸಪ್ಪ ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ದಿನಕ್ಕೊಂದು ವಚನ’ ಎಂಬ ಅಭಿಮಾನದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅತಿಥಿಯಾಗಿ ಆಗಮಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿ, ಸದಾ ಹಸನ್ಮುಖದಿಂದ ಹೊಸತನ ಕಾರ್ಯಕ್ರಮಗಳ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮತ್ತೊಂದು ವಿಶಿಷ್ಟ ಹೆಜ್ಜೆ ಇಡುತ್ತಿರುವ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ಕಾರ್ಯ ಶ್ಲಾಘನೀಯ ಎಂದು ತಮ್ಮ ಮುಕ್ತ ಕಂಠದಿಂದ ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಇಂದು ದಿನಬೆಳಗಾದರೆ ವಾಟ್ಸಪ್, ಪೇಸ್‌ಬುಕ್‌ಗಳ ಮೂಲಕ ಮಿತ್ರ ಜೊತೆ ಹರಟೆ ಹೊಡೆಯುತ್ತ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗುತ್ತಿರುವ ಇಂದಿನ ಯುವಕರ ಮನಸ್ಸನ್ನು ಈ ‘ದಿನಕ್ಕೊಂದು ವಚನ’ ಅಭಿಮಾನದ ಅಭಿಯಾನದ ಮೂಲಕ ವೈಚಾರಿಕ ಚಿಂತನೆಯತ್ತ ಮುಖ ಮಾಡಿಸುವ ಚಿಕ್ಕ ಪ್ರಯತ್ನ ಈ ಅಭಿಯಾನದ್ದಾಗಿದೆ ಎಂದರು.
ಅಕಾಡೆಮಿಯ ಪದಾಧಿಕಾರಿಗಳಾದ ಡಾ.ಕೆ.ಗಿರಿಮಲ್ಲ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುದೇವ ಯಳವಂತಗಿ, ಶಿವಾನಂದ ಮಠಪತಿ, ಬಿ.ಎಂ.ಪಾಟೀಲ ಕಲ್ಲೂರ, ಪರಮೇಶ್ವರ ಶಟಕಾರ, ಜಗದೀಶ ಮರಪಳ್ಳಿ, ಸವಿತಾ ಪಾಟೀಲ ಸೊಂತ, ನೀಲಾಂಬಿಕಾ ಚೌಕಿಮಠ, ನಾಗೇಂದ್ರಪ್ಪ ಮಾಡ್ಯಾಳೆ, ಹಣಮಂಟ ಅಟ್ಟೂರ, ಶಕೀಲ್ ಅಹ್ಮದ್ ಮಿಯ್ಯಾ, ಪ್ರಭುಲಿಂಗ ಮೂಲಗೆ, ಪ್ರಸನ್ನ ವಾಂಜರಖೇಡೆ, ಸತೀಶ ಸಜ್ಜನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.