ಅದು ೧೯೯೪-೯೫ನೇ ಇಸ್ವಿ. ಅದೇ ಆಗ ತಾನೆ ನಾನು ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ. ಪ್ರವೇಶ ಪಡೆದಿದ್ದೆ.
**
ಅಷ್ಟೊತ್ತಿಗಾಗಲೇ ಅಪ್ಪನ ಒಡನಾಟದಲ್ಲಿದ್ದ ಅವರು ಈ ಹಿಂದೆ ಅನೇಕ ಸಲ ಶಹಾಪುರದ ಕುಂಬಾರ ಓಣಿಯಲ್ಲಿದ್ದ ನಮ್ಮ ಮನೆಗೆ ಬಂದಿದ್ದರು. ಹೀಗಾಗಿ ಡಿಪಾರ್ಟ್ಮೆಂಟ್ ನಲ್ಲಿ ನನ್ನ ಜೊತೆ ಸಲುಗೆ, ಸ್ನೇಹದಿಂದ ಇರುತ್ತಿದ್ದರು.
***
ಕಂದು, ಕಪ್ಪು ಮಿಶ್ರಿತ ಚುಕ್ಕಿ ಚುಕ್ಕಿಯ ಸಫಾರಿ ಡ್ರೆಸ್, ಕೆಂಪಂಗಿ ತೊಡುತ್ತಿದ್ದ, ತಲೆ ಗೂದಲನ್ನು ತಾವೇ ಕ್ರಾಪು ಮಾಡಿಕೊಂಡು, ಕಾಲಲ್ಲಿ ಸ್ಪೋರ್ಟ್ಸ್ ಶೂ ಧರಿಸಿ ಬಡೇಪುರದಿಂದ ಯುನಿವರ್ಸಿಟಿಗೆ ಹೋಗಿ ಬರುತ್ತಿದ್ದ ಅವರನ್ನು ಆ ಎರಡ್ಮೂರು ವರ್ಷದಲ್ಲಿ ಪ್ರತಿ ದಿನ ಭೇಟಿಯಾಗಿದ್ದೇನೆ (ಅವರ ಮನೆ ಪಕ್ಕದಲ್ಲಿ ನಮ್ಮ ರೂಂ ಇರುವುದರಿಂದ, ಮೇಲಾಗಿ ಅವರೂ ಸಿಟಿ ಬಸ್ ನಲ್ಲಿ ಓಡಾಡುತ್ತಿದ್ದರು).
**
ಪಾಠ ಹೇಳಲು ತರಗತಿಗೆ ಬಂದರೆ ಸಾಕು, ಕೈಯಲ್ಲಿ ಪುಸ್ತಕವಿಡಿದು ವಿಷಯದಾಳಕ್ಕೆ ಇಳಿದು ಕ್ಲಾಸ್ ರೂಂ ತುಂಬಾ ತಿರುಗಾಡಿ ಎಲ್ಲರ ತಲೆ ನೇವರಿಸಿ, ಗಲ್ಲ ಸವರಿ ಪಾಠ ಹೇಳುತ್ತಿದ್ದರು.
ಅವರು ನನ್ನ ಸಮೀಪ ಬರುತ್ತಾರೆ ಎಂದು ಹಿಂದಿನ ಬೆಂಚ್ ಗೆ ಹೋಗಿ ಕುಳಿತಿದ್ದರೂ ಅಲ್ಲಿಗೆ ಬಂದು ನೀನು ನನ್ನ ಗೆಳೆಯ ಅಣ್ಣ ಲಿಂಗಣ್ಣನ ಮಗ. ಚನ್ನಾಗಿ ಓದಬೇಕು ಎಂದು ಹೇಳುತ್ತಿದ್ದರು.
***
ಒಂದೊಮ್ಮೆ ಅವರೇ ಖುದ್ದಾಗಿ “ನಾ ನಿಮ್ಮನಿಗಿ ಬಂದಿದ್ದೆ. ನಿಮ್ಮವ್ವ ಶಾಂತಮ್ಮ ನನಗ ಬಿಸಿ ರೊಟ್ಟಿ ಮಾಡಿ ಉಣಿಸಿದ್ದಳು. ಆಗ ನಿಮ್ಮಪ್ಪ ಚೆನ್ನಣ್ಣ ಶತಮಾನದ ಹಸಿವು ತೀರಿಸಿಕೊಳ್ಳುತ್ತಾನೆ ಎಂದು ತಮಾಷೆ ಮಾಡಿ ನಕ್ಕಿದ್ದರು. ಆಗ ನಮ್ಮ ಅಕ್ಕ ರೊಟ್ಟಿ ಮಾಡಕಿ, ನಿಮಗೇನು ಲಿಂಗಣ್ಣ? ಎಂದು ಹೇಳಿದ್ದೆ. ಆ ಮಹಾತಾಯಿ ಈಗ ಹೇಗಿದ್ದಾರೆ? ಎಂದು ಕೇಳಿದ್ದರು.
**
ನಾನು ಪ್ರಜಾವಾಣಿಯಲ್ಲಿ ಕಾರ್ಯ ನಿರ್ವಹಿಸುವಾಗ ಈತ ನನ್ನ ಶಿಷ್ಯ ಎಂದು ಹೆಮ್ಮೆಯಿಂದ ಹೇಳುತ್ತಿದ್ದರು ಮಾತ್ರವಲ್ಲ, ನೀವೆಲ್ಲ ಬೆಳಿಬೇಕು, ಬರಿಬೇಕು ಎಂದು ನನ್ನ ಲೇಖನ, ವರದಿಗಳು ಬಂದಾಗ ಫೋನ್ ಮಾಡಿ ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಿದ್ದರು.
**
ಅದು ವ್ಯೋಮಾ ವ್ಯೋಮಾ ಮಹಾ ಕಾವ್ಯ ಬರೆಯುವ ಮತ್ತು ಬಿಡುಗಡೆಯ ಸಂದರ್ಭ. ಆಗ ಬಹಳ ಸಲ ನನ್ನ ಜೊತೆ ಮಾತನಾಡಿದ್ದರು. ಆಮಂತ್ರಣ ಪತ್ರಿಕೆ ಕಳಿಸಿ ಬಿಡುಗಡೆ ಸಮಾರಂಭಕ್ಕೆ ಬರಲು ಹೇಳಿದ್ದರು.
***
ಅಪ್ಪನ ನಿಗೂಢ ಸಾವಿನ ನಂತರ ಈ ಧಾರ್ಮಿಕ ಭಯೋತ್ಪಾದಕರ ಅಸಲಿಯತ್ತನ್ನು ವಿವರಿಸಿದ ಅವರು, ನಿಮ್ಮಪ್ಪ, ನಮ್ಮಣ್ಣ ಲಿಂಗಣ್ಣ ನೇರ, ನಿರ್ಭೆಡೆಯ ಬರಹಗಾರ. ಈ ವ್ಯವಸ್ಥೆ ಅವರನ್ನು ಕೊಂದು ಹಾಕಿತು ಎಂದು ತೀವ್ರ ಹಳಹಳಿ ವ್ಯಕ್ತಪಡಿಸಿದ್ದರು.
**
ಕಲಬುರಗಿಯಲ್ಲಿ ನಡೆಯುತ್ತಿದ್ದ ಮಹತ್ವದ ಸಭೆ- ಸಮಾರಂಭಗಳಲ್ಲಿ ತಮ್ಮ ದತ್ತು ಪುತ್ರ ಶಿವಪ್ರಕಾಶ್ ಜೊತೆ ಆಗಮಿಸುತ್ತಿದ್ದ ಅವರು ೬೦ ರ ಇಳಿ ವಯಸ್ಸಿನಲ್ಲೂ ಊಟ ಮಾಡುವುದನ್ನು ನೋಡುತ್ತಿದ್ದರೆ ಎಂತಹ ಯುವಕರೂ ಅವರ ಮುಂದೆ ನಾಚಬೇಕಿತ್ತು. ಆದರೆ ಕಳೆದ ಹತ್ತು ವರ್ಷಗಳಿಂದ ಶುಗರ್ ಬಂದಿರುವುದರಿಂದ ಅವರ ಊಟ ಕಡಿಮೆಯಾಗಿರುವುದನ್ನು ನಾವು ಗಮನಿಸುತ್ತಿದ್ದೇವು.
**
ಇದಾದ ಕೆಲವು ವರ್ಷಗಳ ಬಳಿಕ ಶಹಾಪುರದಲ್ಲೊಂದು ಗಾಂಧಿ, ಅಂಬೇಡ್ಕರ್ ಮತ್ತು ಸಮಕಾಲೀನತೆ ಕುರಿತು ಮ್ಯಾರಾಥಾನ್ ವಿಚಾರ ಸಂಕಿರಣವೊಂದನ್ನು ಆಯೋಜಿಸಿದ್ದರು. ಈ ವೇಳೆಯಲ್ಲಿ ಅವರು ತಮ್ಮ ಶಿಷ್ಯರೆಲ್ಲರನ್ನು ಕಲೆ ಹಾಕಿ ಅವರಿಂದ ಭಾಷಣ ಮಾಡಿಸಿ ಖುಷಿ ಪಟ್ಟಿದ್ದರು. ನನ್ನ ಮಾತುಗಳನ್ನು ಕೇಳಿದ ಅವರು, ನನ್ನನ್ನು ಬಲವಾಗಿ ಅಪ್ಪಿಕೊಂಡು ಬಾಳ ಚೊಲೋ ಮಾತಾಡಿದಿರಿ, ಭಲೆ! ಭೇಷ್ ಎಂದು ಬೆನ್ನು ಚಪ್ಪರಿಸಿದ್ದರು.
***
ನಾನು ಹೊರ ತರುತ್ತಿರುವ ಶರಣ ಮಾರ್ಗ ಪತ್ರಿಕೆಯನ್ನು ಅವರ ವಿಳಾಸಕ್ಕೆ ಕಳಿಸುತ್ತಿದ್ದೆ. ನಾನು ಮತ್ತು ಸಹೋದರ ವಿಶ್ವಾರಾಧ್ಯ ಬರೆದ ಲೇಖನಗಳನ್ನು ಓದಿ ಪ್ರತಿಕ್ರಿಯಿಸುತ್ತಿದ್ದರು. ಮಾತ್ರವಲ್ಲ ಪತ್ರ ಕೂಡ ಬರೆದು ತಿಳಿಸುತ್ತಿದ್ದರು.
***
ಒಂದೊಮ್ಮೆ ಅವರ ಮನೆಗೆ ಹೋದಾಗ ಊಟ ಮಾಡಿ ಮುಖ ಒರೆಸಿಕೊಂಡು ಅರಾಮ ಖುರ್ಚಿಯಲ್ಲಿ ಕುಳಿತು, ನಾನೀಗ ಬಸವಣ್ಣನ ಕುರಿತು ಮಹಾ ಕಾವ್ಯ ಬರೆಯಬೇಕೆಂದಿರುವೆ. ಆಗ ನಿಮ್ಮ ಸಹಾಯ ಬೇಕು. ಬಸವಣ್ಣ ಅಂದ್ರೆ ಬರೆಗು. ಆ ಬೆರಗಿನ ಬೆಳಗು ಎಲ್ಲರಿಗೂ ಅರ್ಥವಾಗಬೇಕು ಎಂದಿದ್ದರು.
***
ಕಳೆದ ಒಂದು ವರ್ಷದ ಹಿಂದೆ ನನ್ನ ಮನೆ ವಿಳಾಸಕ್ಕೆ ಪತ್ರವೊಂದನ್ನು ಬರೆದು ” ಶಿವರಂಜನ್, ಆರೋಗ್ಯ ಸಮಸ್ಯೆಯಿಂದ ನಿನ್ನ ಪತ್ರಿಕೆ ಓದಲಾಗುತ್ತಿಲ್ಲ. ದಯವಿಟ್ಟು ಪತ್ರಿಕೆ ಕಳಿಸುವುದನ್ನು ನಿಲ್ಲಿಸು. ಅದೇ ಪತ್ರಿಕೆಯನ್ನು ಮತ್ತೆ ಯಾರಾದರು ಓದುತ್ತಾರೆ ಎಂದು ತಮ್ಮದೇ ಆದ ವ್ಯೋಮಾ ವ್ಯೋಮಾ ಅಕ್ಷರಗಳಲ್ಲಿ ಬರೆದು ತಿಳಿಸಿದ್ದರು.
**
ಅವರು ಅಸ್ವಸ್ಥರಾಗಿ ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಭಾನುವಾರ ಭೇಟಿ ನೀಡಿದಾಗ, ಮಿತ್ರ ಸುರೇಶ ಬಡಿಗೇರ ” ಸರ್ ನಿಮ್ಮ ಶಿಷ್ಯ ಶಿವರಂಜನ್ ಬಂದಿದ್ದಾನೆ” ಎಂದಾಗ ತಮ್ಮ ಕಣ್ಣರಳಿಸಿ ನೋಡಿದರು. “ಯವ್ವಾ, ಎಪ್ಪಾ ಎಂದು ನರಳಾಡುತ್ತಿದ್ದರು. ಹೊಟ್ಟೆ ಹುಬ್ಬಿತ್ತು.
***
ತಲೆಯ ಮೇಲೆ ಅಲ್ಲಲ್ಲಿ ಇಲಿ ಕಡಿದಂತಹ ಕೂದಲು ಹೊಂದಿ, ಅವರು ಬದುಕಿದ್ದರೆ ಇದೇ ಫೆಬ್ರವರಿ ತಿಂಗಳಲ್ಲಿ ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗುವ ಸಾಧ್ಯತೆಗಳಿದ್ದವು. ಆದರೆ ಅವರು ಬದುಕಿದ್ದಾಗ ದೊರೆಯಬೇಕಿದ್ದ ಪ್ರಶಸ್ತಿ ಪುರಸ್ಕಾರಗಳು ದೊರೆಯಲಿಲ್ಲ ಎನ್ನುವುದು ಅತ್ಯಂತ ಖೇದದ ಸಂಗತಿ.
***
ರಾತ್ರಿ ೧೦ ಗಂಟೆಗೆ ಅವರು ನಿಧನರಾದರು ಎಂಬ ಸುದ್ದಿ ಕೇಳಿ ಇವೆಲ್ಲ ಘಟನೆಗಳು ನೆನಪಿಗೆ ಬಂದವು. ಚದುರಿದ ಅವರ ಈ ಚಿತ್ರಗಳನ್ನು ಅಚ್ಚು ಕಟ್ಟಾಗಿ ಜೋಡಿಸಿಡಬೇಕಾಗಿದೆ.