ಕವಿತೆ: ಸೂರ್ಯಣ್ಣನಸ್ತಂಗತ

0
67

ಸಂಜೆ ಹೊತ್ತಿಗೆ
ಕೆಂಪು ಸೂರ್ಯನ
ಅಸ್ತಂಗತ,
ಕತ್ತಲಾಗುವ ಮೊದಲೇ
ವ್ಯೋಮಾವ್ಯೋಮದಲ್ಲಿ
ಮೂಡಿತೊಂದು
ಬದ್ಧ ಬುದ್ಧತ್ವದ
ಹೊಸ ನಕ್ಷತ್ರ.

ಉಂಡ ನೋವು
ಕೆಂಡವಾಗಿ
ಕೆಂಪೇರಿತ್ತು ನಡೆ-ನುಡಿ,
ಭಿಡೆಯಿಲ್ಲದ
ಬಂಡಾಯದ
ಭೀಮ ಹೆಜ್ಜೆಯಲ್ಲಿ
ನಿತ್ಯದ ನಡೆಯೂ ಚೆನ್ನ,
ಸತ್ಯದ ನುಡಿಯೂ ಚೆನ್ನ.
ಅಂಬಲಿಯ ನೇಮವಂತೂ
ಚಿನ್ನ-ಅಮೃತಕ್ಕೂ ಚೆನ್ನ.

Contact Your\'s Advertisement; 9902492681

ಬಾಯ್ತುಂಬ
ತಮ್ಮ, ತಂಗಿ, ಅಕ್ಕ, ಅವ್ವರ
ಶಬ್ದಾರ್ಥಗಳ ಹುಗ್ಗಿ,
ಆದರೂ,
ಅಂಗಿ-ಅಂಗ- ಸಂಗ
ಸಹವಾಸಗಳಲ್ಲೂ
ಕೆಂಪಿನದೇ ಸುಗ್ಗಿ.

ಹಂಪನಾಗೆ ಕೊಟ್ಟ
ಪರ್ಯಾಯದ ಕಾಟ,
ಚಂಪಾ ಮನೆಯ
ಶತಮಾನದ ಊಟ,
ಸಾವಿರದ ಏಕಲವ್ಯರ
ಬೆರಳುಳಿಸಿ ಕಲಿಸಿದ
ನಿತ್ಯ ಪಾಠ-

ಗೆಣೆಯ- ಗೆಣತಿಯರ
ಮಹಾಕೂಟ!!
ಅವರವರ ಭಾವಕ್ಕೆ
ಥರಥರಗುಡಿಸಿಯೂ
ನಾಡಿನೆಲ್ಲರ ಬಾಯಲ್ಲೂ
ಉಳಿದ ಒಬ್ಬನೇ ಅಣ್ಣ
ನೀ ಚೆನ್ನಣ್ಣ,

ಮುಂಜಾನೆಯ ಬೆಳಕಾಗುವುದನ್ನೇ
ಕಾಯುತ್ತಿರುವೆ ಚೆನ್ನಣ್ಣ,
ನೋಡಬೇಕಿದೆ ನಾಳಿನ
ಸೂರ್ಯನಿಗೆ ಇರಬಹುದೆ
ನಿ ಬಿಟ್ಟು ಹೋದ ಕೆಂಪು ಬಣ್ಣ!!
— + —

ಡಾ. ಬಸವರಾಜ ಸಾದರ.
24-11-2019

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here