ವಾಡಿ: ನಂಬಿದ್ದ ಎಡವಾದಿ ಸಿದ್ಧಾಂತವನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತ ಚೈತನ್ಯಶೀಲ ಬರಹ ನಾಡಿಗೆ ನೀಡಿರುವ ಸಾಹಿತಿ ಡಾ.ಚನ್ನಣ್ಣ ವಾಲಿಕಾರ ಅವರ ನಿಧನ ಬಂಡಾಯ ಸಾಹಿತ್ಯ ಲೋಕಕ್ಕೆ ಬರಸಿಡಿಲು ಬಡಿದಂತಾಗಿದೆ ಎಂದು ಮೌಢ್ಯ ವಿರೋಧಿ ಹೋರಾಟಗಾರ ಟೋಪಣ್ಣ ಕೋಮಟೆ ಹೇಳಿದರು.
ಹಿರಿಯ ಸಾಹಿತಿ ಡಾ.ಚೆನ್ನಣ್ಣ ವಾಲಿಕಾರ ನಿಧನ ನಿಮಿತ್ತ ಕನ್ನಡ ಸಾಹಿತ್ಯ ಪರಿಷತ್ತು ವಾಡಿ ವಲಯ ಸಮಿತಿ ವತಿಯಿಂದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಶ್ರದ್ಧಾಂಜಲಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಮೌಡ್ಯಗಳ ವಿರುದ್ಧ ಹೋರಾಟದ ಹಾಡುಗಳನ್ನು ಬರೆದುಕೊಟ್ಟವರು. ದಲಿತ, ಶೋಷಿತ, ಹಿಂದುಳಿದ ಎಲ್ಲ ದಮನಿತ ಜನಗಳ ಜಾಗೃತಿಗಾಗಿ ಹೋರಾಟದ ದಾರಿ ತೋರಿಸಿಕೊಟ್ಟವರು. ಸದಾ ನೊಂದ ಜನಗಳ ಬಗ್ಗೆ ಆಲೋಚಿಸುತ್ತಿದ್ದ ಕವಿ ಹೃದಯ ಬಡ ಜನರ ಕಂಡು ಮರುಗುತ್ತಿತ್ತು ಎಂದರು.
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೆಯಾದ ಬದುಕಿನ ತತ್ವಸಿದ್ಧಾಂತಗಳಿರುತ್ತವೆ. ವಿಚಾರದಂತೆ ಬದುಕುವವರು ವಿರಳ. ಆದರೆ ಚೆನ್ನಣ್ಣ ವಾಲಿಕಾರ ಅವರು ಬರೆದಂತೆ ಬದುಕಿದರು. ಅವರ ಸಾಹಿತ್ಯ ನೊಂದವರ ಎದೆಯಲ್ಲಿ ಅಮರವಾಗಿ ಉಳಿಯುತ್ತದೆ. ಜಾನಪದ, ನಾಟಕ, ಕಾವ್ಯ, ಕಥೆ, ಕಾದಂಬರಿ, ಡಪ್ಪಿನಾಟ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ವಾಲಿಕಾರ ಕೃಷಿ ಮಾಡಿ ಜನರನ್ನು ಎಚ್ಚರಿಸಿದ್ದಾರೆ. ಅವರ ಸಾವು ಪ್ರಗತಿಪರ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು ವಲಯ ಅಧ್ಯಕ್ಷ ಖೇಮಲಿಂಗ ಬೆಳಮಗಿ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಮುಖಂಡರಾದ ಸಿದ್ದಯ್ಯಶಾಸ್ತ್ರೀ ನಂದೂರಮಠ, ದೇವಿಂದ್ರ ಕರದಳ್ಳಿ, ಶ್ರವಣಕುಮಾರ ಮೌಸಲಗಿ, ವಿಜಯಕುಮಾರ ಯಲಸತ್ತಿ, ಬಸವರಾಜ ಭಂಕೂರ, ಮಹಾಂತಪ್ಪ ಹೇರೂರ, ಸಿದ್ರಾಮ ಬರ್ಮಾ, ಹಾಜಪ್ಪ ಲಾಡ್ಲಾಪುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.