ಕಲಬುರಗಿ: ಸಂವಿಧಾನ ಸಮರ್ಪಣ ದಿನವು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅತೀ ವಿಜೃಂಭಣೆಯಿಂದ ಹಬ್ಬದಂತೆ ಆಚರಿಸುತ್ತಿರುವುದು ಅತ್ಯಂತ ಸಂತೋಷದ ಸಂಗತಿ. ಇದು ನಮ್ಮೇಲ್ಲರ ಆತ್ಮ ಗೌರವದ ಸಂಕೇತವಾಗಿದೆ. ಪಟ್ಯದ ಮೂಲಕ ವಿದ್ಯಾರ್ಥಿಗಳು ಹಾಗೂ ನಾಗರಿಕರು ಸಂವಿಧಾನವನ್ನು ಓದುವಂತೆ ಮಾಡುತ್ತಿರುವುದು ಅತ್ಯಂತ ಯೋಚಿತ ಕಾರ್ಯವಾಗಿದೆ ಎಂದು ಚಿಟಗುಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಪಕರಾದ ಡಾ. ಜಗದೇವಿ ಗಾಯಕವಾಡ್ ಅವರು ತಿಳಿಸಿದರು.
ಇಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಆದರೆ ಸಂವಿಧಾನವನ್ನು ಓದುವದರೊಂದಿಗೆ ಸರಿಯಾಗಿ ಅರ್ಥೈಸಿಕೊಳ್ಳುವ ಅವಶ್ಯಕತೆಯಿದೆ. ಏಕೆಂದರೆ ಕೆಲವರು ನಡೆದುಕೊಳ್ಳುವ ರೀತಿ ನೋಡಿದರೆ ಅವರು ಸಂವಿಧಾನವನ್ನು ಸರಿಯಾಗಿ ಅಥೈಸಿಕೊಂಡಿಲ್ಲ ಎನ್ನುವಂತೆ ಬಾಸವಾಗುತ್ತದೆ. ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಳ್ಳದಿದ್ದರೆ ಅನೇಕ ಸಮಸ್ಯೆಗಳು ಮತ್ತು ಸವಾಲುಗಳು ಎದುರಾಗುತ್ತವೆ. ಸಂವಿಧಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕೆಲವರು ಅದರ ಮೂಲವನ್ನು ಪರಿಶಿಲಿಸಬೇಕು ಹಾಗೂ ಕೆಲವೊಮ್ಮೆ ಬದಲಾವಣೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ಇದರಿಂದ ಬಹುಸಂಖ್ಯಾತ ಭಾರತೀಯರು ಗೊಂದಲಕೊಳಗಾಗಿದ್ದಾರೆ. ಬದಲಾವಣೆ ಮಾಡಲು ಇದೇನು ಕತೆ ಅಥವಾ ಕಾದಂಬರಿಯಲ್ಲಾ. ಸಂವಿಧಾನವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಭಾರತದ ಧಾರ್ಮಿಕ, ಸಾಮಾಜಿಕ, ಸಂಸ್ಕೃತಿಕ, ಆರ್ಥಿಕ ಮತ್ತು ಶೈಕ್ಷಣಿಕ ವಿವಿಧತೆಯನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ದೇಶದಲ್ಲಿ ಸಂವಿಧಾನವೆ ಪರಮೊಚ್ಚ ಹಾಗೂ ಸಂವಿಧಾನದ ಪ್ರಸ್ತಾವನೆಯು ಅದರ ಇಡೀ ಆಶಯವನ್ನು ವಿವರಿಸುತ್ತದೆ. ಸಂವಿಧಾನವು ನೀಡಿರುವ ಅತ್ಯಂತ ಮುಖ್ಯವಾದ ಸ್ವಾತಂತ್ರ್ಯವೆಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ. ಇಂದಿನ ೨೧ನೇ ಶತಮಾನದಲ್ಲಿ ನಾವೂ ಸಂವಿಧಾನ ರಚನಕಾರರಾದ ಡಾ. ಬಿ.ಆರ್. ಅಂಬೇಡ್ಕರ್‌ರವರನ್ನು ಮರೆಯುತ್ತಿರುವುದು ಅತ್ಯಂತ ದುರದುಷ್ಟಕರ. ನಾ. ಮೊಹನದಾಸರವರ ಸಂವಿಧಾನದ ಓದು ಪುಸ್ತಕದಲ್ಲಿ ಸಂವಿಧಾನ ರಚನೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರ ವಹಿಸಿದ ಪಾತ್ರವನ್ನು ಸರಿಯಾಗಿ ವಿವರಿಸಲಾಗಿದೆ.
ನಮ್ಮ ಸಂವಿಧಾನವು ನಮ್ಮೇಲ್ಲರಿಗೆ ಧಾರ್ಮಿಕ, ಸಾಮಾಜಿಕ, ಸಂಸ್ಕೃತಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆ ಮತ್ತು ನ್ಯಾಯವನ್ನು ನೀಡಿದೆ. ಇದರೊಂದಿಗೆ ಅಸ್ಪೃಶ್ಯತೆ ನಿವಾರಣೆ ಮತ್ತು ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿಯುವ ಮೂಲಕ ದಲಿತರಿಗೆ ಮತ್ತು ಸ್ತ್ರೀಯರಿಗೆ ಸ್ವಾತಂತ್ರ್ಯ ಮತ್ತು ಆತ್ಮ ಗೌರವವನ್ನು ನೀಡಿದೆ. ಇಂತಹ ಸಂವಿಧಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಾನ್ಯ ಕುಲಪತಿಗಳಾದ ಪ್ರೊ. ಎಚ್.ಎಮ್.ಮಹೇಶ್ವರಯ್ಯನವರು ಮಾತನಾಡಿ ದೇಶದ ಸರ್ವಾಂಗಿಣ ಅಭಿವೃದ್ದಿಗೆ ಸಂವಿಧಾನದ ಅನುಕರಣೆ ಅತ್ಯಂತ ಅವಶ್ಯಕ. ನಮ್ಮ ಸಂವಿಧಾನವು ದೇಶದ ವಿವಿಧತೆ ಮತ್ತು ಏಕತೆಯನ್ನು ಅಚ್ಚುಕಟ್ಟಾಗಿ ಹಿಡಿದಿಟ್ಟಿದೆ. ಇದರೊಂದಿಗೆ ನಮ್ಮ ಸಂವಿಧಾನವು ನಮ್ಮೇಲ್ಲರಿಗೂ ಆತ್ಮ ಗೌರವ ಹಾಗೂ ನಾವೇಲ್ಲರು ಒಂದೇ ಎಂಬ ಏಕತೆಯ ಮನೋಭಾವನೆಯನ್ನು ಮೂಡಿಸುತ್ತದೆ. ಸಂವಿಧಾನವು ಎಲ್ಲಾ ಭಾರತೀಯರಿಗೂ ಧಾರ್ಮಿಕ, ಸಾಮಾಜಿಕ, ಸಂಸ್ಕೃತಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮಾನತೆಯನ್ನು ಒದಗಿಸಿಕೊಟ್ಟಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಸಮಕುಲಪತಿಗಳಾದ ಪ್ರೊ. ಜಿ.ಆರ್.ನಾಯಕ್, ಕುಲಸಚಿವರಾದ ಪ್ರೊ. ಮುಸ್ತಾಕ್ ಅಹ್ಮದ್ ಐ ಪಟೇಲ್, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಕುಮಾರಿ ಸಿಮಾ ಶಾಸ್ತ್ರೀ ಸ್ವಾಗತಿಸಿದರೆ, ಕುಮಾರಿ ನಿಶಾ ಜೋಶಿ ವಂದಿಸಿದರು ಹಾಗೂ ಮಂಜುನಾಥ ಎ. ನಿರೂಪಿಸಿದರು.