ಕಲಬುರಗಿ: ಕನ್ನಡಿಗರಾದ ನಮಗೆ ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಸಹಜವಾಗಿ ಅಭಿಮಾನವಿದೆ. ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ರಾಜಕೀಯ ಇಚ್ಛಾಸಕ್ತಿಯ ಕೊರತೆ ಕಂಡು ಬರುತ್ತಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರ ಸಿಂಪಿ ಹೇಳಿದರು.
೬೪ನೇ ರಾಜ್ಯೋತ್ಸವದ ಅಂವಾಗಿ ಕಸಾಪ ಉತ್ತರ ವಲಯ ಘಟಕದ ವತಿಯಿಂದ ಇಲ್ಲಿನ ಆದರ್ಶನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಬೆಳಗ್ಗೆ ಆಯೋಜಿಸಿದ್ದ “ಕನ್ನಡ ಭಾಷೆ ಅಭಿವೃದ್ಧಿ ಮತ್ತು ಸವಾಲುಗಳು” ಉಪನ್ಯಾಸ ಹಾಗೂ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಭಾವ, ಭಾವನೆ ಹಾಗೂ ಚಲನಶೀಲತೆಯಿದೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರ್ರಕ್ಕೆ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದ್ದು, ಪಠ್ಯಗಳ ಭಾಷಾಂತರ ಕಾರ್ಯ, ಆಡಳಿತದಲ್ಲಿ ಕನ್ನಡ, ಪ್ರಾದೇಶಿಕ ಭಾಷೆಗಳ ಅಭಿವೃದ್ಧಿ ಆದಾಗ ಮಾತ್ರ ಕನ್ನಡದ ಉಳಿವು, ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕನ್ನಡ ಶಿಕ್ಷಣ ನೀತಿ ಅನುಷ್ಠಾನ, ಕನ್ನಡ ಉದ್ಯೋಗ (ಅನ್ನ) ಕೊಡುವ ಭಾಷೆ, ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇ. ೫೦ರಷ್ಟು ಮೀಸಲಾತಿ ದೊರೆಯಬೇಕು. ಕರ್ನಾಟಕದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ದೊರೆಯಬೇಕು. ಕನ್ನಡದ ಉಳಿವಿಗೆ ಮಾಡಬೇಕಾದ ಕೆಲಸಗಳು ಮಾಡದೆ ಹೋದರೆ “ಶಸ್ತ್ರಚಿಕಿತ್ಸೆಯೇನೋ ಯಶಸ್ವಿಯಾಯಿತು. ಆದರೆ ರೋಗಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ” ಎನ್ನುವಂತಾಗುತ್ತದೆ.
– ಶಿವರಂಜನ್ ಸತ್ಯಂಪೇಟೆ
ಮುಖ್ಯ ಅತಿಥಿಯಾಗಿದ್ದ ಹಿರಿಯ ಹೋರಾಟಗಾರ ಲಕ್ಷ್ಮಣ ದಸ್ತಿ ಮಾತನಾಡಿ, ಕನ್ನಡ ಭಾಷೆಯ ಸಮಸ್ಯೆ-ಸವಾಲುಗಳಿಗೆ ನಾವೆಲ್ಲರೂ ಕಾರಣರಾಗಿದ್ದೇವೆ. ಕನ್ನಡ ಬದುಕುವ ಭಾಷೆ ಆಗಬೇಕು ಎಂದು ವಿವರಿಸಿ ಹೇಳಿದರು.
ಕನ್ನಡ ಭಾಷೆ ಅಭಿವೃದ್ಧಿ ಮತ್ತು ಸವಾಲುಗಳು” ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ಪತ್ರಕರ್ತ-ಸಾಹಿತಿ ಶಿವರಂಜನ್ ಸತ್ಯಂಪೇಟೆ ಮಾತನಾಡಿ, ಕನಾರ್ಘಟಕದಲ್ಲಿ ಕನ್ನಡ ಕಣ್ಮರೆ ಆಗಬಾರದು. ಭಾಷೆ ಸತ್ತ ಮೇಲೆ ಜನ ಸಾಯುವುದು ಸುಲಭ. ಜನ ಬದುಕಬೇಕಾದರೆ ಭಾಷೆಯನ್ನು ತಾಯಿಯಂತೆ ಪ್ರೀತಿಸಬೇಕು. ಕನ್ನಡ ಜಗತ್ತಿನಾದ್ಯಂತ ವ್ಯಾಪಿಸಿರುವ ಭಾಷೆ. ಕರ್ನಾಟಕದಲ್ಲಿ ಕನ್ನಡ ಇರದೇ ಹೋದರೆ ಅದು ಜಗತ್ತಿನಲ್ಲಿ ಇರಲಾರದು. ಇದೆಲ್ಲದಕ್ಕೂ ರಾಜಕೀಯ ಇಚ್ಛಾಶಕ್ತಿಯ ಕೊರತೆಯ ಜೊತೆಗೆ ಕನ್ನಡಿಗರ ಅಸಡ್ಡೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಜಿಡಿಎ ಮಾಜಿ ಅಧ್ಯಕ್ಷ ಅಸ್ಗರ ಚುಲಬಲ್ ಅತಿಥಿಗಳಾಗಿ ಆಗಮಿಸಿದ್ದರು. ಇದೇವೇಳೆಯಲ್ಲಿ ಬಸವರಾಜ ಚೇಂಗಟಾ, ಚಂದ್ರ ಹಿರೇಮಠ, ಭೀಮಾಶಂಕರ ಫಿರೋಜಾಬಾದ, ಮನೀಷ ಜಾಜು, ನೂರ ಫಾತಿಮಾ ಅನ್ಸಾರಿ, ರೇಷ್ಮಾ ಬೇಗಂ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಅರುಣಕುಮಾರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕಸಾಪ ಉತ್ತರ ವಲಯ ಅಧ್ಯಕ್ಷ ಲಿಂಗರಾಜ ಸಿರಗಾಪುರ ಪ್ರಾಸ್ತಾವಿಕ ಮಾತನಾಡಿದರು. ಗೌರವ ಕಾರ್ಯದರ್ಶಿಗಳಾದ ಜಿ.ಜಿ. ವಣಿಕ್ಯಾಳ ನಿರೂಪಿಸಿದರು. ಅಶೋಕ ಕಮಲಾಪುರ ವಂದಿಸಿದರು. ಸಂಚಾಲಕ ಸಾಜೀದ ಅಲಿ ರಂಜೊಳ್ಳಿ ಸ್ವಾಗತಿಸಿದರು. ಲಕ್ಷ್ಮೀ ಅಣ್ಣಾರಾವ ಪ್ರಾರ್ಥನೆಗೀತೆ ಹಾಡಿದರು.