ಕಲಬುರಗಿ: ಸಾತಿ ಸಂಸ್ಥೆ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‌ಶನ್ ಸೊಸೈಟಿ ಹಾಗೂ ಬಂದಿಖಾನೆ ಇಲಾಖೆ ಕಲಬುರಗಿ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಬುಧವಾರ ಕಾರಾಗೃಹದ ಬಂದಿಗಳಿಗೆ ಏಡ್ಸ್ ಜಾಗೃತಿ ಕಾರ್ಯಕ್ರಮವನ್ನು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಏಡ್ಸ್ ನಿಯಂತ್ರಾಧಿಕಾರಿ ಡಾ. ವಿವೇಕಾನಂದ ರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಹೆಚ್.ಐ.ವಿ. ಏಡ್ಸ್ ಮುಂಜಾಗೃತಾ ಕ್ರಮಗಳ ಬಗ್ಗೆ ವಿವರಿಸಿದರು.
ಐಸಿಟಿಸಿ ಆಪ್ತ ಸಮಾಲೋಚಕರಾದ ಸುಗಲಾರಾಣಿ ಮಾತನಾಡಿ, ಬಹು ಸಂಗಾತಿಗಳೊಂದಿಗೆ ಕಾಂಡೋಮ್ ರಹಿತವಾಗಿ ಲೈಂಗಿಕ ಸಂಪರ್ಕ, ರಕ್ತವನ್ನು ಪರೀಕ್ಷೆ ಮಾಡದೇ ಪಡೆಯುವುದರಿಂದ, ಸಂಸ್ಕರಣೆ ಮಾಡದ ಸೂಜಿ ಹಾಗೂ ಸಿರಿಂಜ್ ಬಳಸುವುದರಿಂದ ಹೆಚ್.ಐ.ವಿ. ಸೋಂಕು ಹರಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರ ಕಾರಾಗೃಹದ ಅಧೀಕ್ಷಕ ಡಾ. ಐ.ಜೆ ಮ್ಯಾಗೇರಿ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದರು. ಸಂಯೋಜಕ ಶ್ರೀನಿವಾಸ ಪವಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಬಸವರಾಜ ಕಿರಣಗಿ ಹಾಗೂ ಜೈಲರ್ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಕ್ರಿಕೆಟ್ ಪಂದ್ಯವನ್ನು ಏರ್ಪಡಿಸಿ ವಿಜೇತರಾದ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿದರು. ಕಾರಾಗೃಹದ ಕಲಿಕಾರ್ಥಿಗಳು ಸ್ವಾಗತ ಗೀತೆ ಹಾಡಿದರು. ಜೈಲರ್ ಗೋಪಾಲಕೃಷ್ಣ ಕುಲಕರ್ಣಿ ಸ್ವಾಗತಿಸಿದರು. ಜೈಲರ್ ಸುನಂದಾ ವಂದಿಸಿದರು.