ಕಲಬುರಗಿ: ಸೇಡಂನ ರಂಗಕಲಾವಿದ ಪ್ರಭಾಕರ ಜೋಶಿ ಅವರು ಕಲಬುರಗಿ ರಂಗಾಯಣದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಪತನದ ನಂತರ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ತೆರವಾಗಿದ್ದ ಈ ಸ್ಥಾನಕ್ಕೆ ಪತ್ರಕರ್ತ, ಸಾಹಿತಿ ಪ್ರಭಾಕರ ಜೋಶಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ಈ ಹಿಂದೆ ಕಲಾವಿದ ಮಹೇಶ ಪಾಟೀಲ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಅದಕ್ಕೂ ಮುನ್ನ ಪ್ರೊ. ಆರ್.ಕೆ. ಹುಡಗಿ ಕಾರ್ಯನಿರ್ವಹಿಸಿದ್ದರು.
ಅದ್ಯಾಕೋ ಗೊತ್ತಿಲ್ಲ ಕಲಬುರಗಿ ರಂಗಾಯಣ ಅಸ್ತಿತ್ವಕ್ಕೆ ಬಂದಾಗಿನಿಂದ ಯಾವ ನಿರ್ದೇಶಕರು ಸಹ ತಮ್ಮ ಪೂರ್ಣಾವಧಿ ಮುಗಿಸಿಲ್ಲ. “ರಂಗಾಯಣವೋ ಅಥವಾ ರಾಂಗಾಯಣವೋ” ಎಂದು ಈ ಹಿಂದೆ ಜೋಶಿಯವರೆ ಪತ್ರಿಕೆಯಲ್ಲಿ ಬರೆದಿದ್ದರು. ಅದೀಗ ರಾಂಗಾಯಣ ಆಗದೆ ರಂಗಾಯಣವಾಗಿ ಉಳಿಯಲಿ ಎಂಬುದು ಅನೇಕ ಸಾಹಿತ್ಯಾಸಕ್ತ ಮತ್ತು ಕಲಾವಿದರ ಆಶಯವಾಗಿದೆ. ಇದನ್ನವರು ಎಷ್ಟರ ಮಟ್ಟಿಗೆ ಈಡೇರಿಸಬಲ್ಲರೋ ಎಂಬುದಕ್ಕೆ ಕಾಲವೇ ಉತ್ತರಿಸುತ್ತದೆ.
ಮಾಧ್ಯಮ ಮಿತ್ರರೊಬ್ಬರು ರಂಗಾಯಣಕ್ಕೆ ನೇಮಕಗೊಂಡಿರುವುದಕ್ಕೆ ಇ-ಮೀಡಿಯಾಲೈನ್ ಸಂಪಾದಕೀಯ ಬಳಗ ಹೃದಯಪೂರ್ವಕವಾಗಿ ಅಭಿನಂದಿಸುತ್ತದೆ.