ಕವಿಗಳಿಗೆ ಕುವೆಂಪು ಸಾಹಿತ್ಯ ಆದರ್ಶ: ಹೊಸಮನಿ

0
55

ವಾಡಿ: ಸಮಾಜಕ್ಕೆ ಗಟ್ಟಿ ಸಾಹಿತ್ಯ ಕೊಡಬೇಕು ಎಂದು ಹಂಬಲಿಸುವ ಇಂದಿನ ಯುವ ಬರಹಗಾರರಿಗೆ ಕುವೆಂಪು ಅವರ ವೈಚಾರಿಕ ಸಾಹಿತ್ಯ ಆದರ್ಶವಾಗಿದೆ ಎಂದು ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಕನ್ಯಾ ಪ್ರೌಢ ಶಾಲೆಯ ಕನ್ನಡ ಶಿಕ್ಷಕ ಬಸವರಾಜ ಹೊಸಮನಿ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ವಲಯ ಘಟಕದ ವತಿಯಿಂದ ಇಲ್ಲಿನ ಅಂಬೇಡ್ಕರ್ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ವೈಜ್ಞಾನಿಕ ಮನೋಭಾವ ಕುರಿತು ಅವರು ಉಪನ್ಯಾಸ ನೀಡಿದರು. ಮೌಢ್ಯ, ಜಾತಿ-ಧರ್ಮ ಹಾಗೂ ದೇವರುಗಳ ಸತ್ಯಾಸ್ತ್ಯತೆಯ ಮೇಲೆ ಬೆಳಕು ಚೆಲ್ಲುವ ವೈಚಾರಿಕ ಸಾಹಿತ್ಯವನ್ನು ಕುವೆಂಪು ನಮಗೆ ಕೊಟ್ಟಿದ್ದಾರೆ. ಪುರೋಹಿತಶಾಹಿ ವರ್ಗದ ಶೋಷಕ ಸಂಪ್ರದಾಯವನ್ನು ಅವರು ಖಂಡಿಸಿದ್ದಾರೆ. ಅಂಧಶ್ರದ್ಧೆಗಳನ್ನು ಟೀಕಿಸಿದ್ದಾರೆ. ಅವರ ನಾಟಕ, ಕಥೆ, ಕಾದಂಬರಿ ಹಾಗೂ ಕಾವ್ಯಗಳು ಸತ್ತಂತಿಹರನ್ನು ಬಡಿದೆಚ್ಚರಿಸುವ ತಾಕತ್ತು ಹೊಂದಿವೆ ಎಂದರು.

Contact Your\'s Advertisement; 9902492681

ಸಮಾಜದಲ್ಲಿ ಮೌಢ್ಯಾಚರಣೆಗಳು ವಿಜ್ರಂಬಿಸುತ್ತಿವೆ. ಇದರಿಂದ ಸಮಾಜ ಮತ್ತಷ್ಟು ಹಿಂದೆ ಸಾಗುತ್ತಿದೆ. ನಮ್ಮ ಮನೆಯ ಮಕ್ಕಳಿಗೆ ಜಾತಿ ಧರ್ಮದ ಚೌಕಟ್ಟು ನಿರ್ಮಿಸದೆ ಕುವೆಂಪು ಅವರ ವಿಶ್ವಮಾನವ ಸಂದೇಶಗಳನ್ನು ಹೇಳಿಕೊಡಬೇಕು. ಮಕ್ಕಳ ಕೊರಳಿಗೆ ಮೌಢ್ಯದ ಘಂಟೆ ಕಟ್ಟಬೇಡಿ. ವೈಜ್ಞಾನಿಕ ವಿಚಾರಗಳನ್ನು ಎಲ್ಲೆಡೆ ಪಸರಿಸಬೇಕು. ಬರಹಗಾರರು ಮತ್ತು ಯುವ ಸಾಹಿತಿಗಳು ಕುವೆಂಪು ಅವರ ದಿಟ್ಟ ಸಾಹಿತ್ಯವನ್ನು ಅನುಕರಿಸುವ ಮೂಲಕ ಅಕ್ಷರ ಕ್ರಾಂತಿ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.

ಕಸಾಪ ವಲಯ ಅಧ್ಯಕ್ಷ ಖೇಮಲಿಂಗ ಎನ್.ಬೆಳಮಗಿ ಮಾತನಾಡಿ, ಕುವೆಂಪು ಕರುನಾಡು ಕಂಡ ಅತ್ಯಂತ ಶ್ರೇಷ್ಠ ಕವಿಯಾಗಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಅನ್ಯಾಯಗಳನ್ನು ವಿರೋಧಿಸಿ ಸಾಹಿತ್ಯ ಕಟ್ಟಿಕೊಡುವ ಮೂಲಕ ಬಂಡಾಯ ಸಾರಿದ್ದಾರೆ. ಪ್ರತಿಯೊಬ್ಬ ಬರಹಗಾರನ ಕಾವ್ಯ ಕಥೆಗಳಲ್ಲಿ ಕುವೆಂಪು ಅವರ ಆಶೆಯ ಎದ್ದುಕಾಣಬೇಕು ಎಂದರು.

ಮುಖಂಡ ಶ್ರವಣಕುಮಾರ ಮೌಸಲಗಿ, ಪುರಸಭೆ ಸದಸ್ಯರಾದ ದೇವಿಂದ್ರ ಕರದಳ್ಳಿ, ಮರಗಪ್ಪಾ ಕಲಕುಟಗಿ, ಕೋಲಿ ಸಮಾಜದ ಅಧ್ಯಕ್ಷ ನಾಗೇಂದ್ರ ಜೈಗಂಗಾ, ಭೀಮಾಶಂಕರ ಸಿಂಧೆ, ವೀರಣ್ಣ ಯಾರಿ, ವಿಜಯಕುಮಾರ ಸಿಂಗೆ, ರಾಜಾ ಪಟೇಲ, ಸಿದ್ದು ಪೂಜಾರಿ, ವಿಜಯಕುಮಾರ ಯಲಸತ್ತಿ, ಶರಣಪ್ಪ ಹಡಪದ, ಬಸಪ್ಪ ಪೂಜಾರಿ, ರವಿಕುಮಾರ ಕೋಳಕೂರ, ಶರಣು ಕರದಳ್ಳಿ ಪಾಲ್ಗೊಂಡಿದ್ದರು. ಶ್ರೀಶೈಲ ಮಲ್ಲಿಕಾರ್ಜುನ ಶಾಲೆಯ ವಿದ್ಯಾರ್ಥಿಗಳಾದ ಕು.ಪಾಯಲ್, ಕು.ಭೂಮಿಕಾ ನಾಡಗೀತೆ ಹಾಡಿದರು. ಕಸಾಪ ಗೌರವ ಕಾರ್ಯದರ್ಶಿ ಸಿದ್ದಯ್ಯಶಾಸ್ತ್ರೀ ನಂದೂರಮಠ ನಿರೂಪಿಸಿದರು. ಚಂದ್ರು ಕರ್ಣಿಕ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here