ಸುರಪುರ: ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ ಇದ್ದರೆ ಅವರು ಸದಾ ನೆನಪಿನಲ್ಲಿ ಉಳಿಯುತ್ತಾರೆ. ಈಗಿನ ಕಾಲದಲ್ಲಿ ಪ್ರಾಮಾಣಿಕರ ಸಂಖ್ಯೆ ಕಡಿಮೆ. ವೆಂಕಟೇಶನಾಯಕ ದೊರಿ ಅರಕೇರಾ ಸೇವೆಯಲ್ಲಿ ಸದಾ ಪ್ರಾಮಾಣಿಕತೆ ಮೆರೆದಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಡಿ. ಕಟ್ಟಿಮನಿ ಹೇಳಿದರು.
ನಿವೃತ್ತ ಪ್ರಭಾರಿ ಪ್ರಾಚಾರ್ಯ ವೆಂಕಟೇಶನಾಯಕ ದೊರಿ ಅರಕೇರಾ ಅವರ ವಯೋನಿವೃತ್ತಿ ನಿಮಿತ್ತ ಭಾನುವಾರ ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಪಪ್ರಾಚಾರ್ಯ ಯಲ್ಲಪ್ಪ ಕಾಡ್ಲೂರು ಮಾತನಾಡಿ, ವೆಂಕಟೇಶನಾಯಕ ೩೮ ವರ್ಷಗಳ ನಿಷ್ಕಳಂಕ ಸೇವೆ ಸಲ್ಲಿಸಿದ್ದಾರೆ. ದೇವದುರ್ಗ ತಾಲ್ಲೂಕಿನ ಬಿ. ಗಣೇಕಲ್, ಜೆ. ಜಾಡಲದಿನ್ನಿ, ಸುರಪುರ ತಾಲ್ಲೂಕಿನ ದೇವಪುರದಲ್ಲಿ ಸಹ ಶಿಕ್ಷಕರಾಗಿ, ಮುಖ್ಯ ಶಿಕ್ಷಕರಾಗಿ ಮತ್ತು ಕಕ್ಕೇರಾದಲ್ಲಿ ಉಪನ್ಯಾಸಕರಾಗಿ, ಕೊನೆಗೆ ಸುರಪುರದಲ್ಲಿ ಪ್ರಭಾರಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದು ನುಡಿದರು.
ನಿವೃತ್ತ ಉಪಪ್ರಾಚಾರ್ಯ ವಾಸುದೇವ ಗಂಗಿ ಮಾತನಾಡಿ, ವೆಂಕಟೇಶನಾಯಕ ಅಪಾರ ಶಿಷ್ಯ ವೃಂದ ಹೊಂದಿದ್ದಾರೆ. ಸ್ನೇಹ ಜೀವಿಗಳು, ಸಹಕಾರ ಮನೋಭಾವದವರು, ನಿಷ್ಠೆ ಮತ್ತು ಸಮಯ ಪರಿಪಾಲನೆಗೆ ಮಹತ್ವ ನೀಡಿದ್ದರು ಎಂದರು. ಪ್ರಾಚಾರ್ಯೆ ಸುವರ್ಣ ಅರ್ಜುಣಗಿ ಅಧ್ಯಕ್ಷತೆ ವಹಿಸಿದ್ದರು. ಡಿವೈಪಿಸಿ ಚಂದ್ರಕಾಂತ ಕೊಣ್ಣೂರ, ಉಪನ್ಯಾಸಕ ಅಶೋಕ ಕೋಳೂರು, ನರಸಪ್ಪ ಭಜಂತ್ರಿ ದೇವದುರ್ಗ, ನಿವೃತ್ತ ಮುಖ್ಯ ಶಿಕ್ಷಕ ಚಿದಾನಂದಪ್ಪ ದೇವದುರ್ಗ, ನಿವೃತ್ತ ಶಿಕ್ಷಕ ಪರಮಣ್ಣ ಜಾಲಹಳ್ಳಿ ಮಾತನಾಡಿದರು.
ಲಕ್ಷ್ಮಣ ಬಿರಾದಾರ ಸ್ವಾಗತಿಸಿದರು. ಲಿಂಗರಾಜ ಹಿರೇಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವು ಹೆಬ್ಬಾಳ ನಿರೂಪಿಸಿದರು. ಸುರೇಶ ದೇವಪುರ ವಂದಿಸಿದರು.
ಭೀಮಣ್ಣ ಭೋಸಗಿ, ವಿರುಪಣ್ಣನಾಯಕ ದೊರಿ ಅರಕೇರಿ, ಬಸವರಾಜ ಇನಾಮದಾರ, ರಮೇಶ ದೊರಿ ಆಲ್ದಾಳ, ಬೀರಣ್ಣ ಬಿ.ಕೆ. ಆಲ್ದಾಳ, ಸೋಪಿಸಾಬ ಗುತ್ತೇದಾರ, ರವಿನಾಯಕ ಭೈರಿಮಡ್ಡಿ, ಭೀಮರಾಯ ಸಿಂಧಗೇರಿ, ಶರಣಯ್ಯಸ್ವಾಮಿ ಮಠಪತಿ, ಈಶ್ವರನಾಯಕ ಜಲ್ಲಿಪಾಳೆ, ಅಶೋಕ ಕುಲಕರ್ಣಿ ಹೆಮನೂರ, ಮಲ್ಲಿಕಾರ್ಜುನ ಸಜ್ಜನ್, ರಾಘವೇಂದ್ರರಾವ ಕೋಠಿಖಾನಿ, ರಾಜು ಟೇಲರ್, ಬಿ.ಬಿ. ಸಲೇಗಾರ ಇತರರು ಇದ್ದರು.