ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಮಹಾ ತಾಯಿ ಸಾವಿತ್ರಿಬಾಯಿ ಫುಲೆ: ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು

0
162

ಕಲಬುರಗಿ: ಬಾಲ್ಯ ವಿವಾಹ, ಸತಿ ಪದ್ಧತಿಯಂತಹ ಅನೇಕ ಸಾಮಾಜಿಕ ಪಿಡುಗುಗಳು ತಾಂಡವವಾಡುತ್ತಿರುವ ಕಾಲದಲ್ಲಿ ಮಹಿಳೆಯರು ಮನೆಯಿಂದ ಹೊರಬಂದು ಶಿಕ್ಷಣವನ್ನು ಪಡೆಯುವುದು ಕಷ್ಟವಾಗಿತ್ತು. ಅಂಥ ಸಾಮಾಜಿಕ ಸಮಸ್ಯೆಗಳನ್ನು ಮೆಟ್ಟಿ ನಿಂತು, ಶಿಕ್ಷಣ ಪಡೆದು ಮಹಿಳೆಯರಿಗೆ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಕೊಡಿಸಿದ ಮಹಾ ತಾಯಿ ಸಾವಿತ್ರಿಬಾಯಿ ಫುಲೆ ಆಗಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು ಹೇಳಿದರು.

ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜಯಂತಿ ನಿಮಿತ್ತ ಇಲ್ಲಿನ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ವಿದ್ಯಾನಗರದ ಸರಕಾರಿ ಬಾಲಕೀಯರ ಮೆಟ್ರಿಕ್ ನಂತರದ ವಸತಿ ನಿಲಯದ ಆವರಣದಲ್ಲಿ ರವಿವಾರ ಹಮ್ಮಿಕೊಂಡ ಸಮಾರಂಭದಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಶಿಕ್ಷಕರಿಗೆ ‘ಗುರು ಸಾವಿತ್ರಿ’ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಅವರು, ಸಾಮಾಜಿಕ ಸರ್ವ ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರದ ಮಾರ್ಗವಾಗಿದೆ. ಶಿಕ್ಷಕರು ಬಿತ್ತಿದ ಬೀಜಗಳೇ ಸಾಮಾಜಿಕ ಶಕ್ತಿಯಾಗಿ ಹೊರಹೊಮ್ಮುತ್ತವೆ. ಇಂದು ಲಭ್ಯವಿರುವ ಶೈಕ್ಷಣಿಕ ಸೌಲಭ್ಯಗಳನ್ನು ಪಡೆದುಕೊಂಡು ಅಂಕಗಳು ಗಳಿಸುವ ಜತೆಗೆ ಸಾಮಾಜಿಕ ಮೌಲ್ಯಗಳನ್ನು ಮೈಗೂಡಿಸಿಕೊಂಡು ಗುರಿ ಸಾಧಿಸಲು ಸಾಧ್ಯ ಎಂದು ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

Contact Your\'s Advertisement; 9902492681

ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಮತ್ತು ಸೇವಾ ಮನೋಭಾವನೆಗಾಗಿ ಇಡೀ ತಮ್ಮ ಜೀವನವನ್ನು ಸವೆಸುವುದರ ಜತೆಗೆ ಮಹಿಳಾ ಶಿಕ್ಷಣಕ್ಕಾಗಿ ಮೊದಲ ಹೆಜ್ಜೆ ಇರಿಸಿದ ಮಹಾ ಗುರು ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ರವರು ಇಂದಿನ ಸಮಾಜಕ್ಕೆ ಮಾದರಿಯಾಗಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಇಂಥ ಮಹಾತ್ಮರ ಸ್ಮರಣೆ ಇಂದಿನ ಸಮಾಜಕ್ಕೆ ಪ್ರೇರಣೆಯಾಗಲೆಂಬ ಸದುದ್ದೇಶದಿಂದ ಈ ತರಹದ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದರು.

ಚಿತ್ತಾಪುರ ಸರಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಅನೀಲಕುಮಾರ ಟೆಂಗಳಿ ಮಾತನಾಡಿ, ತಮ್ಮ ಶೋಷಣೆಗೆ ಅರಿವಿಲ್ಲದೇ ಶೋಷಣೆಗೆ ಒಳಗಾಗುತ್ತಿರುವ ಮಹಿಳೆಯರು ಹಾಗೂ ಅಸ್ಪೃಶ್ಯರಿಗೆ ಶೈಕ್ಷಣಿಕ ಅರಿವು ಮೂಡಿಸಿ ಸಾಮಾಜಿಕ ಸಮಾನತೆ ಹಾಗೂ ಸಮಾಜ ಸೇವೆಗಾಗಿಯೇ ತಮ್ಮ ಜೀವನವನ್ನು ಸವೆಸಿದ ಮಹಾ ತಾಯಿ ಸಾವಿತ್ರಿಬಾಯಿ ಫುಲೆ ಅವರಾಗಿದ್ದಾರೆ ಎಂದು ಹೇಳಿದರು.

ನಿಲಯದ ಮೇಲ್ವಿಚಾರಕಿ ಲಕ್ಷ್ಮೀ ಕೋರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಫಾರ್ಮಾಸಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್.ದೇಸಾಯಿ, ಮಹಿಳಾ ಸಂಘಟಕಿ ಜ್ಯೋತಿ ಎಂ.ಮರಗೋಳ, ಹೋಟೆಲ್ ಉದ್ಯಮಿ ಸುದರ್ಶನ್ ಜತ್ತನ್, ನಿಲಯ ಮೇಲ್ವಿಚಾರಕಿ ಅಶ್ವೀನಿ ಹಡಪದ, ಹಿರಿಯ ಕವಯತ್ರಿ ಶಕುಂತಲಾ ಪಾಟೀಲ ಜಾವಳಿ, ಅಕಾಡೆಮಿಯ ಎಸ್.ಎಂ.ಪಟ್ಟಣಕರ್, ಡಾ.ಕೆ.ಗಿರಿಮಲ್ಲ, ನಾಗೇಂದ್ರಪ್ಪ ಮಾಡ್ಯಾಳೆ, ಭುವನೇಶ್ವರಿ ಹಳ್ಳಿಖೇಡ, ಹಣಮಂತ ಅಟ್ಟೂರ, ಶ್ರೀಕಾಂತ ಪಾಟೀಲ ತಿಳಗೂಳ, ರವೀಂದ್ರಕುಮಾರ ಭಂಟನಳ್ಳಿ, ಪ್ರಭುಲಿಂಗ ಮೂಲಗೆ, ಪ್ರಭುದೇವ ಯಳವಂತಗಿ, ರವಿ ಹಾಗರಗಿ, ಬಿ.ಎಂ.ಪಾಟೀಲ ಕಲ್ಲೂರ, ಚಂದ್ರಕಾಂತ ಬಿರಾದಾರ, ಸತೀಶ ಸಜ್ಜನಶೆಟ್ಟಿ, ನಾಗರಾಜ ಕಾಮಾ ವೇದಿಕೆ ಮೇಲಿದ್ದರು.

ಗುರು ಸಾವಿತ್ರಿ ಪ್ರಶಸ್ತಿ ಪ್ರದಾನ: ಶಿಕ್ಷಕ ವೃತ್ತಿಯಲ್ಲಿದ್ದುಕೊಂಡು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ ಶರಣಮ್ಮ ಎಸ್.ಬಿರಾದಾರ, ಜಯಶ್ರೀ ಚೌಧರಿ, ಸಿದ್ದಮ್ಮ ಎಸ್.ಮಠಪತಿ, ಸುರೇಖಾ ಡಿ.ಜಿ.ಸಾಗರ, ಅಂಬವ್ವ ಗೊರನಾಳ ಅವರನ್ನು ‘ಗುರು ಸಾವಿತ್ರಿ’ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಉಪನ್ಯಾಸಕರೂ ಆದ ಹಾಸ್ಯ ಕಲಾವಿದ ಶರಣು ದೇಸಾಯಿ ಅವರು ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮದಲ್ಲಿ ‘ತಾಯಿ ಹಾಗೂ ಶಿಕ್ಷಕ ವೃತ್ತಿ’ಯಲ್ಲಿನ ವಿವಿಧ ಹಾಸ್ಯ ಪ್ರಸಂಗಗಳನ್ನು ಹೇಳಿ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here