ಕಲಬುರಗಿ: ದೇಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಸತಿ ಗೃಹದ ಒಳಗಡೆ ನುಗ್ಗಿದ ಎಬಿವಿಪಿ ಮತ್ತು ಆರ್ ಎಸ್ ಎಸ್, ಭಜರಂಗ ದಳದ ಕಾರ್ಯಕರ್ತರು ಎಡಪಂಥೀಯ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರೆ ಮೇಲೆ ಮರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ಗುಲ್ಬರ್ಗ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಿಲಿಂದ್ ಸುಳ್ಳದ್ ಮಾತನಾಡಿ ದೇಶದಲ್ಲಿ ಗುಂಡಾ ಸರ್ಕಾರ ಇದೆ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ನಿನ್ನೆ ದೇಹಲಿಯ ಜವಹರಲಾಲ್ ನೆಹರೂ ವಿವಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಗಿದೆ. ಇದನ್ನು ಇವತ್ತು ನಾವು ಖಂಡಿಸುತ್ತೇವೆ. ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷರಾದ ಡಾ. ಅರುಣ್ ಕುರನೆ ಮಾತನಾಡಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆಗಿದ್ದು ತುಂಬಾ ನಾಚಿಗೇಡಿನ ಸಂಗತಿ ಆಗಿದೆ. ಮುಂದಿನ ದಿನಗಳಲ್ಲಿ ನಾವು ಎಲ್ಲರೂ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಆಗುತ್ತದೆ ಎಂದರು. ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಡಾ. ರಾಜಕುಮಾರ ಎಂ ದಣ್ಣೂರ, ಗೌತಮ್ ಕರಿಕಲ್,, ಭಿಮಾಶಂಕರ ದೊಡ್ಡಮನಿ, ಭಬ್ರವಾಹನ್, ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದರು.