ಸುರಪುರ: ನಗರದಲ್ಲಿರುವ ಅನೇಕ ತೂಕದ ಯಂತ್ರಗಳಾದ (ವೇ ಬ್ರಿಡ್ಜ್) ಗಳಲ್ಲಿ ರೈತರ ಭತ್ತ ತೂಕ ಮಾಡುವಲ್ಲಿ ಗೋಲಮಾಲ್ ನಡೆಸಿ ಒಂದು ಕ್ವೀಂಟಾಲ್ ವರೆಗೂ ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಆರೋಪಿಸಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದಿಂದ ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಅನೇಕ ವೇ ಬ್ರಿಡ್ಜ್‌ಗಳ ಮಾಲೀಕರು ಭತ್ತ ಖರೀದಿದಾರರೊಂದಿಗೆ ಶಾಮಿಲಾಗಿದ್ದು, ರೈತರು ಲಾರಿ ಸಮೇತ ತೂಕಕ್ಕೆ ಹೊಯ್ದಾಗ ಸುಮಾರು ೧ ಕ್ವಿಂಟಲ್ ವರೆಗು ಸುಳ್ಳು ತೂಹ ಕಡಿಮೆ ತೋರಿಸುವ ಮೂಲಕ ಖರೀದಿದಾರರಿಗೆ ಲಾಭ ಮಾಡಲು ರೈತರಿಗೆ ಸುಳ್ಳು ಲೆಕ್ಕ ನೀಡಿ ವಂಚಿಸುತ್ತಿದ್ದಾರೆ.ಆದ್ದರಿಂದ ಕೂಡಲೆ ಈ ವೇ ಬ್ರಿಡ್ಜ್ ಮಾಲೀಕರ ಮೇಲೆ ಕ್ರಮ ಕೈಗೊಳ್ಳಬೇಕು.
ಈಗಾಗಲೇ ಅನೇಕ ರೈತರು ಮೋಸಕ್ಕೊಳಗಾಗಿದ್ದು ಇನ್ನೂ ಅನೇಕರಿಗೆ ಮೋಸವಾಗುವ ಮುಂಚೆ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಸಂಘದ ಅಧ್ಯಕ್ಷ ರಾಜಾ ಪಿಡ್ಡ ನಾಯಕ,ಶಂಕರಗೌಡ ಮಾಲಿ ಪಾಟೀಲ,ಬಲಭೀಮ ನಾಯಕ ದೇವಾಪುರ,ಕನಕಾಚಲ ನಾಯಕ ಜಹಾಗೀರದಾರ,ಸೋಮನಾಥ ನಾಯಕ,ಅನಿಲಕುಮಾರ ನಾಯಕ,ಸಾಯಿಬಣ್ಣ ಕುರುಬರಗಲ್ಲಿ,ನಾಗಪ್ಪ ಕುರುಬರಗಲ್ಲಿ,ನಿಂಗಪ್ಪ,ಸಣ್ಣ ನಾಗಪ್ಪ,ಲಕ್ಷ್ಮಣ ಸೇರಿದಂತೆ ಅನೇಕರಿದ್ದರು.