ಕಲಬುರಗಿ: ರೈಲ್ವೆ ಪ್ರಯಾಣಿಕರ ಸೋಗಿನಲ್ಲಿ ಬಂದು ಸಹ ಪ್ರಯಾಣಿಕರಿಂದ ನಗ-ನಾಣ್ಯ ದೋಚುತ್ತಿದ್ದ ಅಂತರ ರಾಜ್ಯ ಮೂವರು ಕಳ್ಳಿಯರು ಮತ್ತು ಓರ್ವ ಕಳ್ಳನನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಶಾರದಾ ಜಾಧವ್(50), ಹುಲಿಗೆಮ್ಮ ಗಾಯಕವಾಡ(55), ರೇಖಾ ಗಾಯಕವಾಡ(60) ಹಾಗೂ ಸಂಭಾಜಿ ಶಿಂದೆ(39) ಬಂಧಿತ ಆರೋಪಿಗಳು. ಬಂಧಿತರಿಂದ ಚಿನ್ನಾಭರಣ ಸೇರಿ ₹7.48 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿಗಳು ರೈಲಿನಲ್ಲಿ ಪ್ರಯಾಣಿಕರ ಸೋಗಿನಲ್ಲಿ ಬಂದು ಸಹ ಪ್ರಯಾಣಿಕರಿಂದ ನಗ-ನಾಣ್ಯ ದೋಚಿ ಪರಾರಿಯಾಗುತ್ತಿದ್ದರು. ವಾಡಿ ಠಾಣೆ ಒಂದರಲ್ಲಿಯೇ ಒಟ್ಟು 4 ಪ್ರಕರಣಗಳು ದಾಖಲಾಗಿದ್ದವು. ಈ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿತ್ತು. ಕಲಬುರಗಿ ರೈಲ್ವೆ ಉಪವಿಭಾಗದ ಡಿವೈಎಸ್ಪಿ ಎಂ ಹೆಚ್ ಉಮಾಶಂಕರ, ಸಿಪಿಐ ಬಸವರಾಜ ತೆಲಿ ಮಾರ್ಗದರ್ಶನದಲ್ಲಿ ಪಿಎಸ್ಐ ಎಸ್ ಹೆಚ್ ವೀರಭದ್ರ ಹಾಗೂ ಇತರೆ ಸಿಬ್ಬಂದಿ ಸೇರಿ ಮಧ್ಯಾಹ್ನ 2ಗಂಟೆ ಸುಮಾರಿಗೆ ಚೆನ್ನೈ-ಮುಂಬೈ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.