ಸುರಪುರ: ಸುರಪುರ ಬಯಲಾಟಗಳಲ್ಲಿನ ಜೀವನ ಮೌಲ್ಯಗಳು ಹಾಗೂ ಮಾನವಿಯ ಮೌಲ್ಯಗಳು ಅಡಕವಾಗಿವೆಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಡಾ. ಸುರೇಶ ಆರ್ ಸಜ್ಜನ್ ಹೇಳಿದರು.
ತಾಲೂಕಿನ ಕನ್ನೆಳ್ಳಿಯ ಗ್ರಾಮದ ಸಗರನಾಡು ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಬಾಗಲಕೋಟೆ ಹಾಗೂ ಸಗರನಾಡು ಸೇವಾ ಪ್ರತಿಷ್ಠಾನದ ಸಹಯೋಗದೊಂದಿಗೆ ಹಮ್ಮಿಕೊಂಡ ಬಯಲಾಟ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅನಾಧಿಕಾಲದಿಂದಲು ಬಯಲಾಟ ಪರಂಪರೆ ನಮ್ಮ ನಾಡಿನಲ್ಲಿ ಬೆಳೆದು ಬಂದಿದ್ದು, ರಂಜನೆ, ಮನೊರಂಜನೆ ಜೊತೆಗೆ ಮಾನವಿಯ ಸಂದೇಶಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬಯಲಾಟ ಪರಂಪರೆ ವಿಶೀಷ್ಠಪುರ್ಣವಾಗಿ ಬೆಳೆದು ಬಂದಿದೆ. ಆ ಸಾಲಿನಲ್ಲಿ ಬಯಲಾಟಗಳು ಹಳ್ಳಿಯ ಜನರ ಐಕ್ಯತೆಯ ಹಾಗೂ ಒಗ್ಗಟಿನ ಪ್ರದರ್ಶನದ ಜೊತೆಗೆ ಸಾಂಸ್ಕೃತಿಕ ಸಂಬಂಧ ಮಾನವಿಯ ಸಂಬಂಧ ಬೆಸೆಯುವ ಬೆಸುಗೆಯಾಗಿವೆ. ಇಂದು ಆಧುನಿಕರಣದ ಭರಾಟೆಗೆ ಟಿವಿ ಮಾಧ್ಯಮಗಳ ಹೊಡೆತಕ್ಕೆ ಬಯಲಾಟ ಕಲೆಗಳು ಮರೆಯಾಗುತ್ತಿವೆ, ಆ ನಿಟ್ಟಿನಲ್ಲಿ ಮತ್ತೊಮ್ಮೆ ಬಯಲಾಟ ಪರಂಪರೆ ಬೆಳೆಸುವ ದೃಷ್ಟಿಕೊನದಿಂದ ಕರ್ನಾಟಕ ಬಯಲಾಟ ಅಕಾಡೆಮಿ ಹೊಸ ಹೊಸ ಯೋಜನೆಗಳನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರೆ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಪ್ರಾಯೋಗಿಕ ನೆಲೆ ಸಿಗುತ್ತದೆ. ಅಲ್ಲದೆ ಕಲೆಗಳ ಕುರಿತು ಹೆಚ್ಚಿನ ವಿಷಯ ಸಂಗ್ರಹವಾಗುತ್ತದೆ. ಅಕಾಡೆಮಿಗಳು ಕಲಾವಿದರಿಗೆ ಮೀಸಲು, ಕಲಾವಿದರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಿದ್ದರೆ ಅಕಾಡೆಮಿಗಳು ತಮ್ಮನ್ನು ತಾವು ವಂಚಿಸಿಕೊಂಡಂತೆ ಎಂದ ಅವರು ದಾಖಲಾತಿಗಳ ಕೊರತೆ ಇದ್ದ ಕಲಾವಿದರೂ ಮಾಶಾಸನಕ್ಕಾಗಲಿ ಅಥವಾ ಅಕಾಡೆಮಿ ಪುರಸ್ಕಾರಕ್ಕಾಗಲಿ ಅರ್ಜಿಗಳನ್ನು ಸಲ್ಲಿಸಿ ಸಂದರ್ಶನದ ಮೂಲಕ ಮಯಸ್ಸು ಮತ್ತು ಪರಿಣಿತಿಯನ್ನು ಆಧರಿಸಿ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಪ್ರಾಸ್ತಾವಿಕವ ಮಾತನಾಡಿದರು, ಬಯಲಾಟ ಅಕಾಡೆಮಿ ಸದಸ್ಯ ಸಂಚಾಲಕ ಮಂಜು ಗುರುಲಿಂಗ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಕಾರ್ಯಕ್ರಮದಲ್ಲಿ ಉಗಾರಪುದ್ರ ಶ್ರೀಕೃಷ್ಣ ಮಂದಿರದ ಉಪನ್ಯಾಸಕರಾದ ಬಾಪು ಶೊಕತ್ ತಾಶೆವಾಲೆ ಹಾಗೂ ಕೆಂಭಾವಿ ಸಂಸ್ಥಾನ ಹಿರೇಮಠದ ಶ್ರೀ.ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು, ಅತಿಥಿಗಳಾಗಿ ಬೈಚಬಾಳ ಗ್ರಾಮಪಂಚಾಯತಿ ಅಧ್ಯಕ್ಷ ನಿಂಗಣ್ಣ ಎಂ.ಗೋಡಿಹಾಳಕರ, ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ, ಯುವ ಮುಖಂದ ಕೃಷ್ಣ ರೆಡ್ಡಿ ಮೂದನುರು, ವಿರಭದ್ರಪ್ಪ ಕುಂಬಾರ, ಅಂಬ್ರೇಶ ಕುಂಬಾರ, ಯಂಕಪ್ಪಗೌಡ ಅರಿಕೇರಿ, ಶಿವಲಿಂಗ ಪೂಜಾರಿ, ಶಿಕ್ಷಕ ಕನಕಪ್ಪ ವಾಗಣಗೇರಿ, ಶಿವಶರಣಪ್ಪ ಹೆಡಿಗಿನಾಳ ವೇದಿಕೆಯಲಿದ್ದರು.
ಕಾರ್ಯಕ್ರಮದಲ್ಲಿ ಕೊಡೆಕಲ್ ವೀರಭದ್ರೇಶ್ವರ ಬಯಲಾಟ ಸಂಘದಿಂದ ಬಯಲಾಟ ಹಾಡುಗಳ ಪ್ರದರ್ಶನ, ಚಡಚಣದ ಲಕ್ಷ್ಮೀ ಬಯಲಾಟ ಮಂಡಳಿವತಿಯಿಂದ ದೊಡ್ಡಾಟ ಕುಣಿತ ಪ್ರಾತ್ಯಕ್ಷಿಕೆ, ಹೊಸಕೋಟೆ ನಿಜಗುಣ ಶಿವಯೋಗಿ ಜಾನಪದ ಕಲಾ ಸಂಘದಿಂದ ಪಾರಿಜಾತ ಪ್ರದರ್ಶನ, ಮಧುರಕಂಡಿ ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಹೆಮರೆಡ್ಡಿ ಮಲ್ಲಮ್ಮ ಸಣ್ಣಾಟ ಪ್ರದರ್ಶನ ನಡೆಯಿತು. ಶಿವಮೂರ್ತಿ ತನಿಕೆದಾರ ಮತ್ತು ಸಂಗಡಿಗರು ಪ್ರಾಥಿಸಿದರು, ಬಿರೇಶ ಕುಮಾರ ದೇವತ್ಕಲ್ ನಿರೂಪಿಸಿದರು, ಲಂಕೇಶ ದೇವತ್ಕಲ್ ಸ್ವಾಗತಿಸಿದರು, ವಿಜಯಕುಮಾರ ಅಂಗಡಿ ವಂದಿಸಿದರು.