ಸುರಪುರ: ದೇಶದ ಹಲವಾರು ಮಹನೀಯರುಗಳ ತ್ಯಾಗ ಬಲಿದಾನದಿಂದ ಸ್ವಾತಂತ್ರ್ಯ ದೊರಕಿದ್ದು ಸ್ವಾತಂತ್ರ್ಯವನ್ನು ದೇಶದ ಎಲ್ಲಾವರ್ಗದ ಜನರಿಗೆ ಸಮಾನ ಹ್ಕ್ಕುಗಳ ಹಂಚಿಕೆಗಾಗಿ ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ರಚಿಸಿದ ಸಂವಿಧಾನದಡಿಯಲ್ಲಿ ಎಲ್ಲರು ಜೀವಿಸುತ್ತಿದ್ದು ನಾವೆಲ್ಲರು ಅಂತಹ ಮಹನೀಯರನ್ನು ಸ್ಮರಿಸಿ ಅವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣದಲ್ಲಿ ಯುವಕರು ಮುಂದಾಗಬೇಕು ಎಂದು ತಹಸೀಲ್ದಾರ್ ನಿಂಗಣ್ಣ ಬಿರಾದಾರ್ ಹೇಳಿದರು.
ನಗರದ ಪ್ರಭು ಕಾಲೇಜು ಆವರಣದಲ್ಲಿ ತಾಲೂಕೂ ಆಡಳಿತದ ವತಿಯಿಂದ ಆಯೋಜಿಸಿ ೭೧ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಇವತ್ತಿನ ತಂತ್ರಜ್ಞಾನಯುಗದಲ್ಲಿ ಯುವ ಸಮೂಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮೂಂದಾಗಬೇಕೆ ಹೊರತು ಸಾಮಾಜಿಕ ಜಾಲ ತಾಣಗಳನ್ನು ತಪ್ಪುದಾರಿ ಹಿಡಿಯಲು ಮುಂದಾಗಬಾರದು ಎಂದು ಯುವ ಸಮುದಾಯಕ್ಕೆ ಕಿವಿಮಾತು ಹೇಳಿದರು.
ವಿವಿಧ ರಂಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ತಾಲೂಕು ಆಡಳಿತದಿಂದ ಸನ್ಮಾನಿಸಲಾಯಿತು, ನಂತರ ವಿವಿಧ ಶಾಲಾ ಮಕ್ಕಳಿಂದ ದೇಶ ಭಕ್ತಗೀತೆಯ ನೃತ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರತ್ನಾ ಓಲೇಕಾರ್ ಪ್ರಾಸ್ತಾವಿಕ ಮಾತನಾಡಿದರು ಜಿಪಂ ಮಾಜಿ ಅಧ್ಯಕ್ಷ ರಾಜಾ ಹಣಮಪ್ಪ ನಾಯಕ (ತಾತಾ), ತಾಲೂಕು ಪಂಚಾಯತ ಅಧ್ಯಕ್ಷೆ ಶಾರದಾ ಬೇವಿನಾಳ, ಎಪಿಎಂಸಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ಗ್ರೇಡ್-೨ ತಹಶಿಲ್ದಾರ ಸುಫಿಯಾ ಸುಲ್ತಾನ, ಡಿವಾಯ್ ಎಸ್ಪಿ ವೆಂಕಟೇಶ ಹೊಗಿಬಂಡಿ, ಬಿಸಿಊಟ ಅಧಿಕಾರಿ ಮೌನೇಶ ಕಂಬಾರ, ಸಮಾಜ ಕಲ್ಯಾಣಾಧಿಕಾರಿ ಸತ್ಯ ನಾರಾಯಣ, ನಗರಸಭೆ ಸದಸ್ಯರಾದ ವೇಣುಮಾಧವ ನಾಯಕ, ನರಸಿಂಹಕಾಂತ ಪಂಚಮಗಿರಿ ಸೇರಿದಂತೆ ಇನ್ನಿತರರಿದ್ದರು. ಅಮರೇಶ ಕುಂಬಾರ ನಿರೂಪಿಸಿ ವಂದಿಸಿದರು.