ಪಡಿತರ ಪಡೆಯಲು ಸರ್ವರ್‌ ಕಾಟ ನ್ಯಾಯಬೆಲೆ ಅಂಗಡಿಯ ಗ್ರಾಹಕರ ಪರದಾಟ

0
90
  • ಮರಿಗೌಡ ಬಾದರದಿನ್ನಿ

ಯಲಬುರ್ಗಾ: ಪಡಿತರ ಚೀಟಿದಾರರು ಸದ್ಯ ಪಡಿತರ ಪದಾರ್ಥಗಳಿಗಾಗಿ ಪರದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ನ್ಯಾಯಬೆಲೆ ಅಂಗಡಿಗಳಲ್ಲಿರುವ ಬಯೋಮೆಟ್ರಿಕ್‌ ಯಂತ್ರಕ್ಕೆ ಅರ್ಹರು ಹೆಬ್ಬೆಟ್ಟು ಕೊಟ್ಟರೂ ಸ್ವೀಕರಿಸುತ್ತಿಲ್ಲ, ಪಡಿತರಕ್ಕಾಗಿ ದಿನಗಟ್ಟಲೆ ಕಾದು ಕೂರುವ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಕಾರಣ ಸರ್ವರ್‌ ಕಾಟ.

ಕಳೆದ ನಾಲ್ಕು ದಿನಗಳಿಂದ ಒಂದು ದಿನಕ್ಕೆ ಮೂರರಿಂದ ನಾಲ್ಕು ಮಂದಿ ಹೆಬ್ಬೆಟ್ಟನ್ನು ಸ್ವೀಕರಿಸುವುದೇ ಹೆಚ್ಚು. ಉಳಿದಂತೆ ಸರ್ವರ್‌ ಸಂಪೂರ್ಣವಾಗಿ ಸ್ಥಗಿತಗೊಂಡಿರುತ್ತದೆ. ಪಡಿತರ ಪಡೆಯಲು ಸಿದ್ಧರಾಗಿ ಬರುವವರು ಸರ್ವರ್‌ ಇಲ್ಲದಿರುವುದನ್ನು ತಿಳಿದು ನಿರಾಸೆಯಿಂದ ವಾಪಸ್‌ ತೆರಳುತ್ತಿದ್ದಾರೆ. ಪ್ರತಿ ತಿಂಗಳ ಮೊದಲ ವಾರದಲ್ಲಿ ಪಡಿತರದಾರರ ಹೆಬ್ಬೆಟ್ಟು ಪಡೆದು ನಂತರ ಪದಾರ್ಥಗಳನ್ನು ನೀಡಿ ಮುಗಿಸಬೇಕು. ಆದರೆ ಜನವರಿ ತಿಂಗಳ ಪಡಿತರವನ್ನು ಹದಿನೈದು ದಿನಗಳಾದರೂ ಕೊಡಲು ಸಾಧ್ಯವಾಗಿಲ್ಲ.

Contact Your\'s Advertisement; 9902492681

ತಾಲೂಕಿನಲ್ಲಿ ಅಂತ್ಯೋದಯ ಬಿಪಿಎಲ್ -ಎಪಿಎಲ್‌ ಕಾರ್ಡ್‌ ಒಟ್ಟು 64 ಸಾವಿರ 300 ಫಲಾನುಭವಿಗಳಿದ್ದಾರೆ. ಯಲಬುರ್ಗಾ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು ಸೇರಿ 117 ನ್ಯಾಯ ಬೆಲೆ ಅಂಗಡಿಗಳಿವೆ. ಬಯೋಮೆಟ್ರಿಕ್‌ ಯಂತ್ರ ಅರ್ಹ ಪಡಿತರದಾರರ ಹೆಬ್ಬೆಟ್ಟು ಸ್ವೀಕರಿಸುವಲ್ಲಿ ವಿಫಲವಾಗುತ್ತಿದೆ. ಇದು ನ್ಯಾಯಬೆಲೆ ಅಂಗಡಿಯವರು ಹಾಗೂ ಪಡಿತರ ಚೀಟಿದಾರರನ್ನು ಬೇಸತ್ತು ಬೀಳುವಂತೆ ಮಾಡಿದೆ. ಅಲ್ಲದೇ ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ತೊಂದರೆ ಉಂಟಾಗಿದೆ. ಪಡಿತರ ಪದಾರ್ಥಗಳನ್ನೇ ಜೀವನಾಧಾರ ಮಾಡಿಕೊಂಡಿರುವವರು ಕೆಲಸ ಬಿಟ್ಟು ದಿನಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಎದುರು ಕಾದು ಕೂರುತ್ತಿದ್ದಾರೆ.

ದಿನವಿಡೀ ಕಾಯ್ದರೂ ಸರ್ವರ್‌ ಸರಿ ಹೋಗದೆ ವಾಪಸ್‌ ತೆರಳಿರುವ ನಿದರ್ಶನಗಳೂ ಇವೆ. ಪಡಿತರ ಚೀಟಿದಾರರಿಂದ ಅವರ ಫೋನ್‌ ನಂಬರ್‌ಗಳನ್ನು ಪಡೆದು ಸರ್ವರ್‌ ಸಿಕ್ಕ ಸಮಯದಲ್ಲಿ ಅವರಿಗೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಹೆಬ್ಬೆಟ್ಟನ್ನು ಬಯೋಮೆಟ್ರಿಕ್‌ ಯಂತ್ರದಲ್ಲಿ ದಾಖಲಿಸಿಕೊಳ್ಳುತ್ತಿದ್ದಾರೆ. ಆದರೆ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಹೆಬ್ಬೆಟ್ಟು ದಾಖಲಾಗದೆ ಅರ್ಹರಿಗೆ ಪಡಿತರ ಪದಾರ್ಥಗಳನ್ನು ನೀಡುತ್ತಿಲ್ಲ. ಇದರಿಂದ ಪಡಿತರ ಚೀಟಿದಾರರು ನ್ಯಾಯಬೆಲೆ ಅಂಗಡಿಗಳಿಗೆ ನಿತ್ಯವೂ ಅಲೆದಾಡುವ ಸ್ಥಿತಿ ಸಾಮಾನ್ಯವಾಗಿದೆ.

ಕೆಲವು ನ್ಯಾಯಬೆಲೆ ಅಂಗಡಿಗಳು ಬೆಳಗ್ಗೆ 8 ಗಂಟೆಗೆ ಬಾಗಿಲು ತೆರೆದರೆ, ಬಹುತೇಕ ಅಂಗಡಿಗಳು ಬೆಳಗ್ಗೆ 10.30ರ ನಂತರ ತೆರೆಯುತ್ತಿವೆ. ಕೆಲವೊಮ್ಮೆ 8 ಗಂಟೆಯಿಂದ 10.30ರವರೆಗೆ ಸರ್ವರ್‌ ಸಿಗುವ ಸಾಧ್ಯತೆಯಿದೆ. ಅದನ್ನು ತಿಳಿದು ಎಲ್ಲ ಕೆಲಸ ಬಿಟ್ಟು ಪಡಿತರ ಚೀಟಿ ಕುಟುಂಬದ ಸದಸ್ಯರು ಬಂದರೂ ಆ ವೇಳೆಯಲ್ಲೂ ಸ್ಥಗಿತಗೊಂಡಿರುವುದು ಪಡಿತರದಾರರನ್ನು ಕಂಗೆಡಿಸುತ್ತಿದೆ. ಇನ್ನು ಬೆಳಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಸರ್ವರ್‌ ಸಿಗುವುದೇ ಇಲ್ಲ. ನ್ಯಾಯ ಬೆಲೆ ಅಂಗಡಿ ಮಾಲೀಕರು ಪಡಿತರ ಪದಾರ್ಥಗಳನ್ನು ನೀಡಲಾಗದೆ ಅಸಹಾಯಕತೆ ಪ್ರದರ್ಶಿಸುವುದು ಸಾಮಾನ್ಯವಾಗಿದೆ. ಕೂಡಲೇ ಸರ್ವರ್‌ ಸಮಸ್ಯೆ ಬಗೆಹರಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಪಡಿತರ ಫಲಾನುಭವಿಗಳು ಒತ್ತಾಯಿಸಿದ್ದಾರೆ.

ಸರ್ವರ್ ಸಮಸ್ಯೆ ರಾಜ್ಯದ ಎಲ್ಲ ಕಡೆ ಕಂಡು ಬಂದಿದೆ ಪಡಿತರ ಪಡೆಯಲು ಮತ್ತು ಹೆಬ್ಬೆಟ್ಟು ನೀಡಲು ಪ್ರತ್ಯೇಕ ಸಾಪ್ಟವೇರ್‌ ಕಾರ್ಯನಿರ್ವಹಿಸಲಿದ್ದು, ಸಮಸ್ಯೆ ಸಂಪೂರ್ಣ ಬಗೆಹರಿಯಲಿದೆ.    – ಶಿವಶರಣ , M ಆಹಾರ ಶಿರಸ್ತೇದಾರರು ಯಲಬುರ್ಗಾ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here