ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕೆ ಹೋಗಿ
ಅಡಿ ಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡರೆ
ಗಟ್ಟಿ ಪಾದರಕ್ಷೆಯ ತೆಗೆದು
ಲೊಟಲೊಟನೆ ಹೊಡೆಯಂದಾತ
ನಮ್ಮ ಅಂಬಿಗರ ಚೌಡಯ್ಯ
-ನಿಜಶರಣ ಅಂಬಿಗರ ಚೌಡಯ್ಯ
ವಿಶ್ವಗುರು ಬಸವಣ್ಣನವರು ವೀರಶೈವ ಧರ್ಮ ಸ್ವೀಕರಿಸಿದರು ಎಂಬ ಗೊಂದಲಕ್ಕೆ ತೆರೆ ಎಳೆಯಬೇಕಾದರೆ ಬಸವ ಸ್ಥಾಪಿತ ಲಿಂಗಾಯತ ಧರ್ಮವನ್ನು ಸ್ಥೂಲವಾಗಿ, ಸ್ಥಲಸ್ಪರ್ಶಿಯಾಗಿ ಅಧ್ಯಯನ ಮಾಡಬೇಕಾಗುತ್ತದೆ. ಶ್ರೇಷ್ಠ ಕುಲದ ಶೈವ ಕುಟುಂಬದಲ್ಲಿ ಜನಿಸಿದ ಬಸವಣ್ಣನವರಿಗೆ ಇನ್ನೊಂದು ಧರ್ಮ ಸ್ವೀಕರಿಸುವ ಅಗತ್ಯವಿರಲಿಲ್ಲ. ಅದರ ಅವಶ್ಯಕತೆಯೂ ಅವರಿಗೆ ಇರಲಿಲ್ಲ. ತಮ್ಮ ಧರ್ಮದಲ್ಲಿ ಇರುವ ಶೋಷಣೆ, ಅಸ್ಪೃಶ್ಯತೆಯನ್ನು ಕಂಡು ರೋಸಿ ಹೋಗಿ ಲಿಂಗಾಯತ ಎಂಬ ಸ್ವತಂತ್ರ ಧರ್ಮವನ್ನು ಅವರು ಸ್ಥಾಪಿಸಿದರು.
ಲಿಂಗಾಯತ ಧರ್ಮದ ಆಚಾರ-ವಿಚಾರ ಜನರಿಗೆ ಗೊತ್ತಾದರೆ ತಮ್ಮ ಒಳಗಿನ ಅಸ್ತಿತ್ವದ ಆಟ ನಡೆಯುವುದಿಲ್ಲ ಎಂಬ ಜಾತಿವಾದಿಗಳು, ಸಂಪ್ರದಾಯವಾದಿಗಳು ಇಲ್ಲದ ಕುತಂತ್ರವನ್ನು ಹುಟ್ಟು ಹಾಕಿದರು. ಬಸವಧರ್ಮ-ಲಿಂಗಾಯತ ಧರ್ಮ ನಾಶ ಮಾಡುವುದೇ ಇವರ ಪ್ರಮುಖ ಗುರಿ. ಶಂಕರಾಚಾರ್ಯರು, ಮಧ್ವಾಚಾರ್ಯರು, ರಾಮಾನುಜಾಚಾರ್ಯರು ಸ್ಥಾಪಿಸಿದ್ದು ಮತವೇ ಹೊರತು ಧರ್ಮ ಅಲ್ಲ. ಧರ್ಮ ಒಂದೇ ಇದ್ದಾಗ ಉಳಿದವರು ಯಾಕೆ ಅದನ್ನು ಸ್ವೀಕರಿಸಲಿಲ್ಲ. ಹಾಗಾದರೆ ಒಂದಕ್ಕಿಂತ ಒಂದು ಭಿನ್ನ ಎಂದು ಅವರು ಯಾಕೆ ಹೇಳಿದರು? ಎಂಬುದನ್ನು ನಾವು ಯೋಚಿಸಬೇಕಿದೆ. ಏಕ ಸಂಸ್ಕೃತಿಯ ಪರಾಕಾಷ್ಠೆಯು ಧರ್ಮವೆನಿಸುವುದಿಲ್ಲ.
ಇಸ್ಲಾಂ. ಕ್ರೈಸ್ತ, ಬೌದ್ಧ, ಜೈನ ಧರ್ಮಗಳಿಗೆ ತನ್ನದೇ ಆದ ಅಸ್ತಿತ್ವ ಇದೆ. ಅನೇಕ ಸಂಸ್ಕೃತಿ, ಆಚರಣೆ, ತತ್ವ, ವಿಚಾರಧಾರೆ ಒಳಗೊಂಡಿರುವ ದೇಶ ಇದು. ಭಾಷೆ, ತತ್ವ, ಆಚರಣೆಗಳಲ್ಲಿ ಇಲ್ಲಿ ವಿಭಿನ್ನತೆಯಿದೆ. ಭಾಷೆ ವ್ಯವಹಾರಕ್ಕೆ ಬಳಸುವ ಸಾಧನವೇ ಹೊರತು ಭಾಷೆಯೇ ಧರ್ಮ ಆಗುವುದಿಲ್ಲ. ಬಸವಣ್ಣನಿಗಿಂತ ಪೂರ್ವದಲ್ಲಿ ಇಷ್ಟಲಿಂಗವಿರಲಿಲ್ಲ. ವೀರಶೈವ ಈ ದೇಶದ ಸಪ್ತ ಶೈವಗಳಲ್ಲಿ ಒಂದು. ಹೀಗಾಗಿ ಅದು ಕೂಡ ಒಂದು ಮತವೇ ಹೊರತು ಧರ್ಮವಲ್ಲ. ಮತಕ್ಕೂ ಧರ್ಮಕ್ಕೂ ಬಹಳ ವ್ಯತ್ಯಾಸವಿದೆ. ವೀರಶೈವ ಅದೊಂದು ಪರಂಪರೆಯಲ್ಲಿ ಬಂದಿದೆ. ಲಿಂಗಾಯತದಂತೆ ಅದಕ್ಕೆ ಸ್ವತಂತ್ರ ಅಸ್ತಿತ್ವವಿಲ್ಲ.
ವೀರಶೈವ ಹಾಗೂ ಲಿಂಗಾಯತದಲ್ಲಿ ಬರುವ ಅಷ್ಟಾವರಣ, ಷಟಸ್ಥಲ, ಸದಾಚಾರ ಒಂದೇ ಆಗಿವೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದರೂ ಅವುಗಳ ಅರ್ಥ, ವ್ಯವಸ್ಥೆ ಬೇರೆ ಬೇರೆಯಾಗಿವೆ. ವೀರಶೈವರಲ್ಲಿ “ಗುರು” ಅನ್ನುವ ಪದ ವ್ಯಕ್ತಿವಾಚಕ ಮತ್ತು ಜಾತಿ ವಾಚಕವಾಗಿದ್ದರೆ ಲಿಂಗಾಯತದಲ್ಲಿ ಇದು ತತ್ವ ವಾಚಕವಾಗಿ ಬಳಸಲಾಗುತ್ತದೆ. ವೀರಶೈವರು “ಸ್ಥಾವರಲಿಂಗ”ವನ್ನು ಪೂಜಿಸುತ್ತಾರೆ. ಆದರೆ ಲಿಂಗಾಯತ “ಇಷ್ಟಲಿಂಗ” ಎಂಬ ಪರಿಕಲ್ಪನೆಯನ್ನು ಹೇಳುತ್ತದೆ. ಅಂಬಿಗರ ಚೌಡಯ್ಯನವರು “ಕಟ್ಟಿದ ಲಿಂಗವ ಬಿಟ್ಟು ಬೆಟ್ಟದ ಲಿಂಗಕ್ಕೆ ಹೋದರೆ” ಎಂದು ತುಂಬಾ ಖಾರವಾಗಿ ಖಂಡಿಸಿದ್ದಾರೆ.
ಮತ ಅನುಯಾಯಿಗಳಿಗೆ ಸೀಮಿತವಾದರೆ, ಧರ್ಮ ಎಲ್ಲರಿಗೂ ಸೇರಿದ್ದು. ಮಾದಾರ ಚೆನ್ನಯ್ಯ, ಢೋಹಾರ ಕಕ್ಕಯ್ಯ, ಮಡಿವಾಳ ಮಾಚಿದೇವರಿಗೆ ಸೇರಿದ ಧರ್ಮ ಈ ಲಿಂಗಾಯತ ಧರ್ಮ. ಬಸವಣ್ಣನವರಿಗೆ ಜಾತವೇದ ಮುನಿಗಳು ಲಿಂಗ ಕಟ್ಟಲಿಲ್ಲ. ವೀರಶೈವರಲ್ಲಿ “ಜಂಗಮ” ಜಾತಿಯಾದರೆ, ಲಿಂಗಾಯತರಲ್ಲಿ ಅದು “ತತ್ವ”ವಾಗಿದೆ. ದೇವರಿಗೆ “ವಿಭೂತಿ” ಹಚ್ಚುವವರು ಬೇರೆ, ತಮ್ಮ ಮೈಗೆ “ವಿಭೂತಿ” ಹಚ್ಚಿಕೊಳ್ಳುವವರೇ ಬೇರೆ. ವೀರಶೈವರಿಗೆ “ರುದ್ರಾಕ್ಷಿ” ಕೇವಲ ಸಂಕೇತವೆನಿಸಿದರೆ ಲಿಂಗಾಯತರು ಅದನ್ನು ಜ್ಞಾನನೇತ್ರ ಎಂದು ಕರೆದರು.
ವೀರಶೈವರಿಗೆ “ಓಂನಮಃ ಶಿವಾಯ” ಮಂತ್ರವಾದರೆ, ಲಿಂಗಾಯತರಿಗೆ “ನಮಃ ಶಿವಾಯ ಓಂ ಬಸವ” ಮಂತ್ರವಾಗಿದೆ. ವೀರಶೈವರು ದೇವರ ಎದುರಿಗೆ ಮಂತ್ರ ಪಠಿಸುವರು. ದೇವರಿಗೆ ಮಂತ್ರವಿಲ್ಲ ಎಂದವರು ಲಿಂಗಾಯತರು. ಅಲ್ಲಿ ಪರುಷ ಕಬ್ಬಿಣ ಮುಟ್ಟಿ ಚಿನ್ನವಾಗುವ ವ್ಯವಸ್ಥೆ ಇಲ್ಲ. ಆದರೆ ಇಲ್ಲಿ ಗುರು ಮುಟ್ಟಿ ಗುರುವಾಗುವ ವ್ಯವಸ್ಥೆ ಇದೆ. ಅಕ್ಕ ಮಹಾದೇವಿ ಇಂತಹ ಮಂತ್ರ ಸಾಧನೆ ಮಾಡಿದ್ದಳು.
ನಮ್ಮ ದೇಶದಲ್ಲಿ ಎಲ್ಲ ಧರ್ಮದ, ಎಲ್ಲ ಮತದ ಅನುಯಾಯಿಗಳು ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕು. ಧರ್ಮದ ವಿಷಯದಲ್ಲಿ ಘರ್ಷಣೆಗಳಾಗಬಾರದು. ಎಲ್ಲರೂ ಬದುಕುವ, ಎಲ್ಲರನ್ನೂ ಬದುಕಿಸುವ ಧರ್ಮ ನಮ್ಮ ಧರ್ಮವಾಗಬೇಕು. ಕಾಯಕವೇ ಧರ್ಮವಾಗಬೇಕು. ಏಕತೆಯೇ ಮಂತ್ರವಾಗಬೇಕು. ೯೯ ಪಂಗಡಗಳ ಜನರು ಬಸವ ಧರ್ಮ ಸ್ವೀಕರಿಸಿದರು. ಧರ್ಮದ ಹೆಸರಲ್ಲಿ ದ್ವೇಷ ಹುಟ್ಟಬಾರದು. ಭಾಷೆಯ ವಿಷಯದಲ್ಲಿ ಗದ್ದಲ ಎಬ್ಬಿಸಬಾರದು. ಕೆಳಗೆ ಬಿದ್ದವರನ್ನು ಮೇಲಕ್ಕೆತ್ತುವ ಪ್ರಜಾಪ್ರಭುತ್ವ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದರು.
ಬರಹಕ್ಕೆ: ಶಿವರಂಜನ್ ಸತ್ಯಂಪೇಟೆ
(ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನ, ಜೇವರ್ಗಿ)