ಕಲಬುರಗಿ: ಡಿಸಿಎಂ, ಜಿಲ್ಲಾ ಉಸ್ತುವಾರಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾದ ಗೋವಿಂದ್ ಕಾರಜೋಳ ಕಾಣೆಯಾಗಿದ್ದಾರೆ. ಅವರನ್ನ ಹುಡುಕಿಕೊಡಿ ಅಂತಾ ಕಲಬುರಗಿಯಲ್ಲಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಫೆಬ್ರುವರಿ 5, 6 & 7 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನಕ್ಕೆ ಕೇವಲ ನಾಲ್ಕು ದಿನ ಬಾಕಿ ಉಳಿದಿವೆ. ಆದ್ರೆ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಮಾತ್ರ ಇನ್ನೂ ಜಿಲ್ಲೆಯತ್ತ ಸುಳಿದಿಲ್ಲ. ಕೇವಲ ಒಂದು ಸಭೆ ನಡೆಸಿ ಕಾರಜೋಳ ಕಾಣೆಯಾಗಿದ್ದಾರೆ. ಅವರನ್ನು ಹುಡುಕಿಕೊಡಿ ಅಂತಾ ಕನ್ನಡ ಪರ ಸಂಘಟನೆ ಒಕ್ಕೂಟ, ಕರಪತ್ರಗಳನ್ನ ಹಂಚಿಕೆ ಮಾಡಿದರು.
ಅಲ್ಲದೆ, ಕಾಣೆಯಾಗಿರುವ ಡಿಸಿಎಂ ಗೋವಿಂದ ಕಾರಜೋಳರನ್ನು ಹುಡುಕಿಕೊಡುವಂತೆ ನಗರ ಪೊಲೀಸ್ ಆಯುಕ್ತರಿಗೆ ಸಂಘಟನೆಯ ಸದಸ್ಯರು ದೂರು ನೀಡಿದ್ದಾರೆ. ಸಮ್ಮೇಳನದ ವಿಚಾರದಲ್ಲಿ ಸಾಹಿತಿಗಳನ್ನು, ಕನ್ನಡ ಪರ ಸಂಘಟನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ಜಿಲ್ಲಾಡಳಿತ, ಜಿಲ್ಲಾ ಕಸಾಪ ಅಧ್ಯಕ್ಷರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳು ತುಟಿ ಬಿಚ್ಚದೆ ಮೌನಕ್ಕೆ ಶರಣಾಗಿದ್ದಾರೆಂದು ಆರೋಪಿಸಿದ್ದಾರೆ.