ಸಮ್ಮೇಳನಕ್ಕೆ ಆಗಮಿಸುವ ಸಾಹಿತ್ಯಾಸಕ್ತರಿಗೆ ಉತ್ತಮ ವಸತಿ, ಸಾರಿಗೆ ವ್ಯವಸ್ಥೆ: ಪ್ರಿಯಾಂಕ್ ಖರ್ಗೆ

0
42

ಕಲಬುರಗಿ: ಸೂಫಿ ಸಂತರ ನಾಡಿನಲ್ಲಿ ಮೂರು ದಶಕಗಳ ನಂತರ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದ್ದು, ಸಮ್ಮೇಳನದಲ್ಲಿ ಭಾಗವಹಿಸಲು ಸಾಹಿತ್ಯಾಸಕ್ತರು ದಾಖಲೆ ಪ್ರಮಾಣದಲ್ಲಿ ನೋಂದಣಿ ಮಾಡಿಸಿದಾರೆ ಅವರೆಲ್ಲರಿಗೂ ಅಗತ್ಯ ವಸತಿ ಹಾಗೂ ಸಾರಿಗೆ ಸೌಲಭ್ಯ ಕಲ್ಪಿಸಲು ಕ್ರಮವಹಿಸಲಾಗುತ್ತಿದೆ ಎಂದು ಸಾಹಿತ್ಯ ಸಮ್ಮೇಳನದ ಸಾರಿಗೆ ಮತ್ತು ವಸತಿ ಸಮಿತಿ ಅಧ್ಯಕ್ಷ ಹಾಗೂ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.

ಅವರು ಜ.೩೧ರ ಶುಕ್ರವಾರ ನಗರದ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮ್ಮೇಳನಕ್ಕೆ ಆಗಮಿಸುವ ನೋಂದಾಯಿತ ಗಣ್ಯರಿಗೆ, ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳಿಗೆ ಸೂಕ್ತ ರೀತಿಯಲ್ಲಿ ವಸತಿ ಸೌಕರ್ಯ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ನೋಂದಣೆ ಸಮಯದಲ್ಲಿ ಮೊಬೈಲ್ ಸಂಖ್ಯೆ ನೀಡಿದ ಪ್ರತಿನಿಧಿಗಳಿಗೆ ಮೂರು ದಿನ ಮೊದಲೇ ತಮ್ಮ ಕೋಣೆ ಕಾಯ್ದಿರಿಸಿದ ಮಾಹಿತಿ ನೀಡಲಾಗುವುದು, ಕೆಲವು ನೋಂದಾಯಿತ ಪ್ರತಿನಿಧಿಗಳು ತಮ್ಮ ಮೊಬೈಲ್ ಸಂಖ್ಯೆ ನೀಡಿಲ್ಲ. ರಾಜ್ಯದ ವಿವಿಧ ಭಾಗಗಳಿಂದ ನುಡಿ ತೇರು ಎಳೆಯಲು ಆಗಮಿಸುವ ಕನ್ನಡಾಭಿಮಾನಿಗಳಿಗೆ ವಸತಿ ಮತ್ತು ಸಮ್ಮೇಳನಕ್ಕೆ ತೆರಳಲು ಸಮಸ್ಯೆ ಆಗದಂತೆ ನೋಡಿಕೊಳ್ಳಲು ಕ್ರಮವಹಿಸಲಾಗಿದೆ ಎಂದವರು ಹೇಳಿದರು.

Contact Your\'s Advertisement; 9902492681

ವಸತಿ ವ್ಯವಸ್ಥೆ: ನುಡಿ ಜಾತ್ರೆಗೆ ರಾಜ್ಯದೆಲ್ಲೆಡೆಯಿಂದ ೨೨,೨೧೨ ಪ್ರತಿನಿಧಿಗಳು ನೋಂದಣೆ ಮಾಡಿಕೊಂಡಿದ್ದು, ಅವರಿಗೆ ಉಳಿದುಕೊಳ್ಳಲು ನಗರದಲ್ಲಿರುವ ೬೦ ಹೊಟೇಲ್‌ಗಳಲ್ಲಿ ೭೬೨ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ ಇನ್ನೂಳಿದಂತೆ ಕಲ್ಯಾಣ ಮಂಟಪ, ಶಾಲಾ, ಕಾಲೇಜು, ವಸತಿ ನಿಲಯಗಳು ಮತ್ತು ಸರ್ಕಾರಿ ಅತಿಥಿಗೃಹಗಳಲ್ಲಿ ಮತ್ತು ಲಾಡ್ಜ್‌ಗಳಲ್ಲಿ ಗಣ್ಯರು, ಪದಾಧಿಕಾರಿಗಳು ಮತ್ತು ಪ್ರತಿನಿಧಿಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಸಾರಿಗೆ ವ್ಯವಸ್ಥೆ: ನುಡಿ ಜಾತ್ರೆಗೆ ಆಗಮಿಸುವ ಸಾಹಿತ್ಯಾಸ್ತಕರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಡಲು ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳಿಂದ ೨೦೦ ಮಿನಿ ಬಸ್, ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ೨೦ ಬಸ್‌ಗಳು, ೯೦ ಸಿಟಿ ಬಸ್‌ಗಳು, ೧೦೦ ಕಾರುಗಳು ಹಾಗೂ ೨೦ ಇನ್ನೋವಾ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಪ್ರತಿಯೊಂದು ತಾಲೂಕಿನಿಂದ ೨ ಬಸ್‌ಗಳನ್ನು ಬಿಡಲಾಗುವುದು. ಮೂರು ದಿನಗಳ ಕಾಲ ನಡೆಯಲಿರುವ ಅಕ್ಷರ ಜಾತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಸಮಾರಂಭ ಸ್ಥಳಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಆಟೋ ಚಾಲಕರು ರಿಯಾಯಿತಿ ದರವನ್ನು ನಿಗದಿಪಡಿಸುವ ಬಗ್ಗೆ ಆಟೋ ಚಾಲಕ ಸಂಘದ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದು, ಆದರೆ ಅವರು ಇದರ ಕುರಿತು ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮಾಹಿತಿ ನೀಡಿದರು.

ಸಹಾಯವಾಣಿ ಸ್ಥಾಪಿಸಿ: ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅನುಕೂಲವಾಗಲು ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿ ಸ್ಥಾಪನೆ ಮಾಡಲಾಗಿದೆ. ಫೆಬ್ರವರಿ ೩ ರಿಂದ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಲಭಿಸುತ್ತದೆ. ದೂರವಾಣಿ ಸಂಖ್ಯೆ ೭೨೫೯೫೪೨೯೫೦, ೮೧೦೫೫೪೨೯೫೦, ೭೬೧೯೫೪೨೯೫೦ ಮತ್ತು ೯೦೦೮೫೪೨೯೫೦ ಗಳಿಗೆ ಸಂಪರ್ಕಿಸಬಹುದಾಗಿದೆ. ಈ ಸಹಾಯವಾಣಿ ಕೇಂದ್ರದಲ್ಲಿ ೪ ಜನರಿದ್ದು, ಒಬ್ಬ ಅಧಿಕಾರಿ ೩ ಜನ ಸಹಾಯಕರು ಪಾಳಿಯಲ್ಲಿ ಸೇವೆ ಸಲ್ಲಿಸುತ್ತಾರೆ ಎಂದು ಹೇಳಿದರು.

೨೪ ನೋಡಲ್ ಅಧಿಕಾರಿಗಳು, ೨೦೦ ಸಂಪರ್ಕ ಅಧಿಕಾರಿಗಳು ಮತ್ತು ೪೦೦ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಇವರು ಅತಿಥಿಗಳಿಗೆ ಯಾವುದೆ ಸಮಸ್ಯೆಯಾಗದಂತೆ ನೊಡಿಕೊಳ್ಳುವರು. ೧೫೦ ಕ್ಕಿಂತ ಹೆಚ್ಚಿನ ಜನರು ಉಳಿದುಕೊಳ್ಳುವ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ ರಾಜಾ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಪ್ರವೀಣ ಪ್ರಿಯಾ ಡೇವಿಡ್, ಗಣ್ಯರಾದ ಜಗದೇವ ಗುತ್ತೆದಾರ್ ಇನ್ನಿತರ ಅಧಿಕಾರಿಗಳು ಗೋಷ್ಠಿಯಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here