ಆಳಂದ: ತಾಲೂಕಿನ ಹೊದಲೂರ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.
ಶನಿವಾರ ಹೊದಲೂರ ಗ್ರಾಮದಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಹೊದಲೂರನಿಂದ ಖಜೂರಿ ಬಾರ್ಡರ್‌ವರೆಗಿನ ಒಟ್ಟು ೪.೯೦ ಕೋ. ರೂ. ವೆಚ್ಚದ ರಸ್ತೆ ಕಾಮಗಾರಿ ಹಾಗೂ ಹೊದಲೂರನಿಂದ ಅಣೂರ ಗ್ರಾಮದವರೆಗಿನ ೫೦ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ೨೦೧೯-೨೦ನೇ ಸಾಲಿನ ಅನುದಾನದ ೭೦ ಲಕ್ಷ ರೂ. ವೆಚ್ಚದ ಡಿಗ್ಗಿ ಕ್ರಾಸನಿಂದ ಹೊದಲೂರ ತಾಂಡಾದವರೆಗಿನ ರಸ್ತೆ ಕಾಮಗಾರಿ ಹಾಗೂ ಹೊದಲೂರ ಗ್ರಾಮದಲ್ಲಿ ೧೫ ಲಕ್ಷ ರೂ. ವೆಚ್ಚದ ನೀರಿನ ಟ್ಯಾಂಕ್ ಕಾಮಗಾರಿಗಾರಿ ಸೇರಿದಂತೆ ಒಟ್ಟು ೬.೨೫ ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಸುಭಾಷ್ ಆರ್ ಗುತ್ತೇದಾರ, ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ. ತಾಲೂಕು ಸೇರಿದಂತೆ ಗಡಿಗ್ರಾಮಗಳ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ಜನರ ಪ್ರೀತಿ, ವಿಶ್ವಾಸದಿಂದ ನಾಲ್ಕು ಬಾರಿ ಚುನಾಯಿತನಾಗಿದ್ದೇನೆ. ಮತದಾರರ ನಿರೀಕ್ಷೆ ಮೀರಿ ಕೆಲಸ ಮಾಡುವ ಉತ್ಸಾಹದಲ್ಲಿದ್ದೇನೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅವಶ್ಯಕವಾಗಿದೆ ಎಂದರು.
ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ, ದಕ್ಷ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇರುವುದರಿಂದ ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇನೆ. ಮುಖ್ಯಮಂತ್ರಿಗಳಿಗೆ ನಮ್ಮ, ಮೇಲೆ ಅತಿಯಾದ ವಿಶ್ವಾಸ ಇರುವುದರಿಂದ ಈ ಭಾಗದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ, ತಾ.ಪಂ ಉಪಾಧ್ಯಕ್ಷ ಗುರು ಪಾಟೀಲ, ಮುಖಂಡರಾದ ವೀರಣ್ಣ ಮಂಗಾಣೆ, ಅಶೋಕ ಸಾವಳೇಶ್ವರ, ಮಲ್ಲಿಕಾರ್ಜುನ ಕಂದಗೂಳೆ, ಆನಂದರಾವ ಪಾಟೀಲ ಕೊರಳ್ಳಿ, ಶರಣು ಮುರುಮೆ, ಸಿದ್ದು ಬನಶೆಟ್ಟಿ, ಮಹೇಬೂಬ್ ಪಟೇಲ್, ಕಿರಣ ಮುರುಮೆ ಸೇರಿದಂತೆ ಇತರರು ಇದ್ದರು.