ಸುರಪುರ: ಇಂದು ನರೇಂದ್ರ ಮೋದಿ ಫೋನ್ ಮಾಡಿದರೆ ಇಲ್ಲಿಯ ಬಿಜೆಪಿ ನಾಯಕರು ಎದ್ದು ನಿಂತು ಮಾತನಾಡುತ್ತಾರೆ. ಸೋನಿಯಾ ಗಾಂಧಿ ಫೋನ್ ಮಾಡಿದರೆ ಕಾಂಗ್ರೇಸ್ ನಾಯಕರು ಎದ್ದು ನಿಂತು ಮಾತನಾಡುತ್ತಾರೆ.ಇದು ನಮ್ಮ ಸಂಸ್ಕೃತಿಯಲ್ಲ,ನಾಲ್ವಡಿ ರಾಜಾ ವೆಂಕಟಪ್ಪ ನಾಯಕ,ಸಂಗೊಳ್ಳಿ ರಾಯಣ್ಣ,ಕಿತ್ತೂರ ಚೆನ್ನಮ್ಮನಂತ ವೀರರು ಜನಸಿದ ನಾಡಲ್ಲಿಯ ರಾಜಕಾರಣಿಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ಹೈಕಮಾಂಡ್ ಸಂಸ್ಕೃತಿಯ ಗುಲಾಮರಾಗಿದ್ದಾರೆ.ಆದ್ದರಿಂದ ಇಂದು ಕನ್ನಡದ ಬಲಿಷ್ಠ ಪ್ರಾದೇಶಿಕ ಪಕ್ಷ ರಾಜ್ಯಕ್ಕೆ ಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಭಿಮತ ವ್ಯಕ್ತಪಡಿಸಿದರು.
ನಗರದ ಶೀ ವೇಣುಗೋಪಾಲಸ್ವಾಮಿ ದೇವಸ್ಥಾನ ಆವರಣದಲ್ಲಿ ಕರವೇ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಹಾಗು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಸುರಪುರ ತಾಲೂಕಿನ ಯುವಕರಲ್ಲಿ ಇಲ್ಲಿಯ ಅರಸರ ಸ್ವಾಭಿಮಾನದ ಕಿಚ್ಚಿದೆ,ಅದರೊಂದಿಗೆ ಕನ್ನಡದ ಸ್ವಾಭಿಮಾನವನ್ನು ತುಂಬಿಕೊಂಡು ಹೋರಾಟಕ್ಕೆ ಮುಂದಾಗುವಂತೆ ಕರೆ ನೀಡಿದರು.ಇಂದು ಕನ್ನಡ ನಾಡಿಗೆ ಪಂಚರಾಜ್ಯಗಳು ಕಾಡುತ್ತಿವೆ.ಬೆಳವಾಗಾಗಿ ಮಹಾರಾಷ್ಟ್ರ,ಮಹಾದಾಯಿಗಾಗಿ ಗೋವಾ,ಕಾಸರಗೋಡಿಗಾಗಿ ಕೇರಳ,ಕೃಷ್ಣಾ ನದಿಗಾಗಿ ಆಂಧ್ರ ಹಾಗು ಕಾವೇರಿಗಾಗಿ ತಮಿಳುನಾಡು ಇವುಗಳ ಮದ್ಯೆ ಕನ್ನಡ ನಾಡನ್ನು ಕಟ್ಟುವ ಕೆಲಸ ಎಲ್ಲರ ಮೇಲಿದೆ.ಮೋದಿ ಅಮಿತ್ ಷಾ ಅವರು ಒಂದು ನಿಮಿಷ ಯೋಚಿಸಿದರೆ ಮಹಾದಾಯಿ ಸಮಸ್ಯೆ ಬಗೆ ಹರಿಯಲಿದೆ.ಆದರೆ ಇಲ್ಲಿಯ ರಾಜಕಾರಣಿಗಳ ನಿರ್ಲಕ್ಷ್ಯದಿಂದ ಜನರು ಕುಡಿಯುವ ನೀರಿಗೆ ಪರದಾಡಬೇಕಿದೆ.ಮೋದಿ ಕೇವಲ ಗುಜರಾತಿನ ಪ್ರಧಾನಿ ಅಲ್ಲ,ದೇಶದ ಪ್ರಧಾನಿ ಎಂಬುದನ್ನು ಮರೆತಂತಿದೆ,ಕರ್ನಾಟಕವನ್ನು ಕೇಂದ್ರ ಮಲತಾಯಿ ಧೋರಣೆಯಿಂದ ನೋಡುತ್ತಿದೆ,ಇಂತಹ ಸಮಸ್ಯೆ ದೂರವಾಗಲು ಎಲ್ಲರಲ್ಲಿ ಪ್ರಾದೇಶಿಕ ಚಿಂತನೆ ಬೆಳೆಯುವುದು ಅವಶ್ಯ ಎಂದರು.
ನೆರೆ ಸಂತ್ರಸ್ತರ ಪರಿಹಾರದ ಕುರಿತು ಆಕ್ರೋಶ ವ್ಯಕ್ತಪಡಿಸಿದ ನಾರಾಯಣಗೌಡ,ಇಂದು ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕೊಡುತ್ತಿರುವ ರಾಜ್ಯ ಕರ್ನಾಟಕ ಆದರೆ ನಮ್ಮ ರಾಜ್ಯದ ನೆರೆ ಸಂಸ್ತ್ರರಿಗೆ ಇದುವರೆಗೆ ಸಮರ್ಪಕವಾದ ಪರಿಹಾರ ದೊರೆತಿಲ್ಲ, ಮೋದಿ ಯಾರಪ್ಪನ ಮನೆ ದುಡ್ಡು ಕೊಡ್ತಿರಿ ಎಂದು ಕೇಳುವ ತಾಕತ್ತು ಇಲ್ಲಿಯ ಯಾವ ರಾಜಕಾರಣಿಗಳಿಗು ಇಲ್ಲ ಎಂದರು.
ಬೆಳಗಾವಿ ವಿಷಯದಲ್ಲಿ ಪದೆ ಪದೆ ಕಾಲು ಕೆದರುತ್ತಿರುವ ಎಂ.ಇ.ಎಸ್ ಮಟ್ಟ ಹಾಕಲು ಕರವೇ ಸಿದ್ದವಾಗಿದೆ ಎಂದರು.ಅಲ್ಲೆದೆ ಮಹಿಳೆಯರು ಮಕ್ಕಳಿಂದ ಮಮ್ಮಿ ಎನಿಸಿಕೊಳ್ಳುವ ಬದಲು ಅಮ್ಮ ಎಂದು,ಡ್ಯಾಡ್ ಎನಿಸಿಕೊಳ್ಳುವ ಬದಲು ಅಪ್ಪ ಎಂದು, ಆಂಟಿ ಅನಿಸಿಕೊಳ್ಳುವ ಬದಲು ಚಿಕ್ಕಮ್ಮ ಎಂದು ಮತ್ತು ಅಂಕಲ್ ಅನಿಸಿಕೊಳ್ಳುವ ಬದಲು ಚಿಕ್ಕಪ್ಪ ಎನಿಸಿಕೊಲ್ಳುವಂತೆ ಕನ್ನಡ ಪ್ರೇಮ ತಿಳಿಸಿದರು.ಇಂತಹ ಸಮಾವೇಶಗಳ ಮೂಲಕ ಎಲ್ಲರೂ ಜಾಗೃತರಾಗಬೇಕಿದೆ ಮತ್ತು ಇಲ್ಲಿಯ ಯುವಕರು ಕನ್ನಡದ ನಾಡು ನುಡಿಯ ಸ್ವಾಭಿಮಾನ ಬೆಳಸಿಕೊಳ್ಳುವ ಮೂಲಕ ಎಲ್ಲರಲ್ಲೂ ಒಬ್ಬೊಬ್ಬ ವೆಂಕಟಪ್ಪ ನಾಯಕ ಮೂಡಬೇಕೆಂದು ಕಿವಿಮಾತು ಹೇಳಿದರು.
ಇದಕ್ಕು ಮುನ್ನ ಭುವನೇಶ್ವರಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮಾತನಾಡಿ,ಇಂದು ಕನ್ನಡ ಜಾಗೃತಿ ಸಮಾವೇಶ ಹಮ್ಮಿಕೊಂಡಿರುವುದು ಸಂತೋಷದ ವಿಷಯವಾಗಿದೆ.ಕರವೇಯ ಎಲ್ಲಾ ಹೋರಾಟಗಳಿಗು ಬೆಂಬಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರವೇ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜಿನಪ್ಪ ಮಾತನಾಡಿ,ಕರವೇ ಅನೇಕ ಎರಡು ದಶಕಗಳಿಂದ ಹಲವಾರು ಯಶಸ್ವಿ ಹೋರಾಟಗಳನ್ನು ಮಾಡುತ್ತಾ ಬಂದಿದೆ,ರೈಲ್ವೆ ಇಲಾಖೆಯಲ್ಲಿನ ೪೭೦೦ ಡಿ.ಗ್ರುಪ್ ಹುದ್ದೆಗಳು ಕನ್ನಡಿಗರಿಗೆ ಸಿಗುವಂತೆ ಮಾಡಿದ್ದು,ರೈಲ್ವೆ ಪರೀಕ್ಷೆಗಳು ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವಂತೆ ಮಾಡಿದ್ದು,ಬೆಳಗಾವಿಯಲ್ಲಿ ಎರಡು ದಶಕದ ನಂತರ ಕನ್ನಡದ ಮೆಯರ್ ಮಾಡಿದ್ದು ಇಂತಹ ನೂರಾರು ಹೋರಾಟಗಳನ್ನು ಮಾಡಿದೆ,ಇದರಲ್ಲಿ ನಿಮ್ಮದೆ ಊರಿನ ಕನ್ನಡ ಕಿಂಕರ ಬಸವರಾಜ ಪಡಕೋಟೆಯ ಹೋರಾಟದ ಪಾಲು ದೊಡ್ಡದಿದೆ ಎಂದರು.ಮುಂದೆ ಕರವೇ ಪ್ರಾದೇಶಿಕ ಪಕ್ಷ ಮಾಡುವ ಚಿಂತನೆ ಇದೆ ಇದಕ್ಕೆ ತಾವೆಲ್ಲರು ಬೆಂಬಲಿಸುವಂತೆ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದ ಡಾ:ಹರ್ಷವರ್ಧನ ರಫಗಾರ,ರಾಮಾಚಾರಿ ನಾಗರಾಳ, ನ್ಯಾಯವಾದಿ ಜಿ.ತಮ್ಮಣ್ಣ,ಪತ್ರಕರ್ತ ಗಿರೀಶ ಶಾಬಾದಿ,ಗಾಯಕ ಶರಣುಕುಮಾರ ಜಾಲಹಳ್ಳಿ,ಬಾಲ ವಿಜ್ಞಾನ ಪ್ರಶಸ್ತಿ ಪುರಸ್ಕೃತ ರಂಜಿತಾ ಚಂದ್ರಕಾಂತ ಕೊಣ್ಣೂರ,ಕ್ರೀಡಾಪಟು ಮರೆಪ್ಪ ಗುರಿಕಾರ ಸೇರಿದಂತೆ ೨೧ ಜನ ಸಾಧಕರಿಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ನಂತರ ಸರಿಗಮಪ ಗಾಯಕರಾದ ಪರತ್ವಿ ಭಟ್,ಮೋನಮ್ಮ ಸೋಮನಮರಡಿ,ಮಹುಬೂಬಸಾಬ್ ಹಾಗು ಯಾರ್ ಮಗಾ ಸಿನೆಮಾದ ನಟ ರಘು ಪಡಕೋಟೆ ಹಾಗು ದಿಲೀಪ್ ಬಾಬು ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದಕ್ಕು ಮುನ್ನ ಮದ್ಹ್ಯಾನ ನಗರದಲ್ಲಿ ಭುವನೇಶ್ವರಿಯ ಅದ್ಧೂರಿ ಮೆರವಣಿಗೆ ನಡೆಸಲಾಯಿತು ಹಾಗು ಸಾಯಂಕಾಲ ದೇವಾಪುರ ಯುವಕರಿಂದ ಬಿಲ್ವಿದ್ಯೆ ಪ್ರದರ್ಶನ ನಡೆಯಿತು.ಜಿ.ಪಂ.ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ(ತಾತಾ) ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು,ದೇವಾಪುರ ಜಡಿಶಾಂತಲಿಂಗೇಶ್ವರ ಮಠದ ಶಿವಮೂರ್ತಿ ಶಿವಚಾರ್ಯ,ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ,ಲಕ್ಷೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸಾನಿಧ್ಯ ವಹಿಸಿದ್ದರು.ವೇದಿಕೆ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ ಪಡಕೋಟೆ, ರಾಜ್ಯ ಉಪಾಧ್ಯಕ್ಷ ಸತೀಶಗೌಡ,ಮಹಿಳಾ ಉಪಾಧ್ಯಕ್ಷೆ ಸಹನಾ ಶೇಖರ,ಶಿವಕುಮಾರ ನಾಟಿಕಾರ್,ಸಂತೋಷ ಡಂಬಳ,ಜಿಲ್ಲಾಧ್ಯಕ್ಷ ಭೀಮು ನಾಯಕ,ಮಹೇಶ ಕಾಶಿ,ವಿನೋದರಡ್ಡಿ,ಸೋಮನಾಥ ಡೊಣ್ಣಿಗೇರಾ ,ಬಲಭೀಮ ನಾಯಕ ಬೈರಿಮಡ್ಡಿ, ಇತರರು ವೇದಿಕೆ ಮೇಲಿದ್ದರು. ಕರವೇ ತಾಲೂಕು ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮರಡಿ ಪ್ರಾಸ್ತಾವಿಕವಾಗಿ ಮಾತನಾಡಿದರು,ಶಿವಮೋನಯ್ಯ ಎಲ್.ಡಿ.ನಾಯಕ ಸ್ವಾಗತಿಸಿದರು,ಮಲ್ಲಯ್ಯ ಸ್ವಾಮಿ ಪರಸನಹಳ್ಳಿ ನಿರೂಪಿಸಿದರು,ಅನಿಲ ಬಿರಾದಾರ ವಂದಿಸಿದರು. ಭೀಮುನಾಯಕ ಮಲ್ಲಿಬಾವಿ,ವೆಂಕಟೇಶ ಪ್ಯಾಪ್ಲಿ,ಅಂಬ್ಲಯ್ಯ ಬೇಟೆಗಾರ,ಹಣಮಗೌಡ ಶಖಾಪುರ,ರವಿರಾಜ ಕಂದಳ್ಳಿ,ಶ್ರೀನಿವಾಸ ನಾಯಕ,ಆನಂದ ಮಾಚಗುಂಡಾಳ,ಆಕಾಶ ಹೆಗ್ಗಣದೊಡ್ಡಿ,ಶ್ರವಣಕುಮಾರ ಡೊಣ್ಣಿಗೇರಾ,ಅಯ್ಯಪ್ಪ ವಗ್ಗಾಲಿ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.