ಶಹಾಬಾದ: ನಗರದ ಸಹರಾ ಸಭಾಂಗಣದಲ್ಲಿ ಡಿ-ಸ್ಪಿರೀಟ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಡೆದ ತಾಲೂಕಾ ಮಟ್ಟದ ನೃತ್ಯ ಸ್ಪರ್ಧೆ ಕಾರ್ಯಕ್ರಮ ಜನಮನ ಸೂರೆಗೊಂಡಿತು.
ತಾಲೂಕಿನ ವಿವಿಧ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಿಂದ ಸುಮಾರು ೭೮ ನೃತ್ಯ ತಂಡಗಳಲ್ಲಿ ೨೦ ಕ್ಕೂ ಹೆಚ್ಚು ತಂಡಗಳ ನಡುವೆ ತೀವ್ರ ಪೈಪೋಟಿ ನಡೆಯಿತು.
ಬಿಜೆಪಿ ಜಿಲ್ಲಾ ಮುಖಂಡ ಬಸವರಾಜ ಮದ್ರಕಿ, ಬಿಸಿಲು ನಾಡು- ಫರ್ಸಿಯ ನಾಡಲ್ಲಿ ಇಂತಹ ಕಲಾ ಅಕಾಡೆಮಿ ವತಿಯಿಂದ ಪ್ರವತಿಭೆಗಳಿಗೆ ಅವಕಾಶ ನೀಡಿರುವುದು ಶ್ಲಾಘನೀಯವಾದುದು.ಹಿಂದುಳಿದ ಪ್ರದೇಶ ಎಂದು ಹಣೆಪಟ್ಟಿಯನ್ನು ಅಳಿಸುವಂಥ ನೃತ್ಯವನ್ನು ಇಲ್ಲಿನ ಯುವ ಪ್ರತಿಭೆಗಳು ನೀಡಿದನ್ನು ನೋಡಿದರೇ ಆಶ್ಚರ್ಯವಾಗುತ್ತದೆ.ಅಲ್ಲದೇ ಇಲ್ಲಿನ ಮಕ್ಕಳಲ್ಲಿ ಪ್ರತಿಭೆ ಅಡಗಿದೆ.ಆದರೆ ಅದಕ್ಕೆ ಮಾರ್ಗದರ್ಶನ ಹಾಗೂ ನೀರೆರೆಯುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ವಿಜೇತರು : ಪ್ರಾಥಮಿಕ ವಿಭಾಗದಲ್ಲಿ ಸೇಂಟ್ ಥಾಮಸ್ ಶಾಲೆಯ ಮಕ್ಕಳು ಪ್ರಥಮ ಬಹುಮಾನ, ನಾಗಪ್ಪ ಚನ್ನಪ್ಪ ಇಂಗಿನಶೆಟ್ಟಿ ಕಾಲೇಜಿನ ಮಕ್ಕಳು ದ್ವಿತೀಯ ಸ್ಥಾನ ಹಾಗೂ ಆಸ್ರಾ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಿಆರ್‌ಪಿ ಶಿವಪುತ್ರ ಕರಣಿಕ್ ಮಾತನಾಡಿ, ಡಿ-ಸ್ಪಿರೀಟ್ ಡ್ಯಾನ್ಸ್ ಅಕಾಡೆಮಿಯಂತೆ ಎಲೆಯ ಮರೆಯ ಕಾಯಿಯಂತಿರುವ ಪ್ರತಿಭೆಗಳನ್ನು ಪರಿಚಯಿಸುವಂಥ ಕೆಲಸ ವೇದಿಕೆಗಳಿಂದ ಆಗಬೇಕಿದೆ ಎಂದು ಹೇಳಿದರು.
ಬೆಂಗಳೂರಿನ ಡ್ಯಾನ್ಸ್ ಮಾಸ್ಟರ್ ಸಂಪತ್, ಸಂಯೋಜಕ ಮತ್ತು ಕಲಾವಿದ ಬಸವರಾಜ ಮಯೂರ, ಡಿ-ಸ್ಪಿರೀಟ್ ಡ್ಯಾನ್ಸ್ ಅಕಾಡೆಮಿಯ ನಿರ್ದೇಶಕ ಪ್ರಮೋದ ನಾಟೀಕಾರ,ನಗರಸಭೆಯ ಸದಸ್ಯ ರವಿ ರಾಠೋಡ, ಮುಖಂಡರಾದ ಕಿರಣಕುಮಾರ ಚವ್ಹಾಣ, ಇಮಾನುವೆಲ್, ಕೆಪಿಟಿಸಿಎಲ್ ಅಧಿಕಾರಿ ಭರತ್‌ಕುಮಾರ, ಜಾನಪದ ಸಾಹಿತ್ಯ ಪರಿಷತ್ತ ಅಧ್ಯಕ್ಷ ರಾಜಶೇಖರ ದೇವರಮನಿ, ಮುಖಂಡ ಜಹೀರ ಪಟವೇಗರ್ ಇತರರು ಇದ್ದರು. ಬಸವರಾಜ ಕೊಲ್ಲೂರ್ ನಿರೂಪಿಸಿದರು, ರಾಜು ನಾಟೇಕಾರ ಸ್ವಾಗತಿಸಿದರು, ಶಿಲ್ಪಾ ವಂದಿಸಿದರು.
ಪ್ರೌಢಶಾಲಾ ಮತ್ತು ಕಾಲೇಜು ವಿಭಾಗದಲ್ಲಿ ನಗರದ ಶಿವಯೋಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಬಹುಮಾನ, ಸರಕಾರಿ ಪ್ರೌಢಶಾಲೆ ಹೊನಗುಂಟಾದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಹಾಗೂ ಎಸ್.ಎಸ್.ಮರಗೋಳ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.