ಸುರಪುರ: ಅಮೇರಿಕಾದೊಂದಿಗೆ ಭಾರತ ಮಾಡಿಕೊಳ್ಳುತ್ತಿರುವ ಒಪ್ಪಂದ ದಿಂದ ದೇಶಕ್ಕೆ ಸುಮಾರು ೪೨ ಸಾವಿರ ಕೋಟಿ ರೂಪಾಯಿಗಳ ಹೈನು ಉತ್ಪಾದನೆಗಳು ಮತ್ತು ಕೋಳಿ ಉತ್ಪನ್ನಗಳು ಹಾಗು ಟರ್ಕಿ ಮತ್ತಿತರೆ ಕೃಷಿ ಉಪಕರಣಗಳು ಆಮದುಗೊಳ್ಳುತ್ತವೆ. ಇದರಿಂದ ಹೈನುಗಾರಿಕೆಯಲ್ಲಿ ತೊಡಗಿದ ಕುಟುಂಬಗಳು ನಷ್ಟ ಹೊಂದುತ್ತವೆ. ಅಲ್ಲದೆ ಸೇಬು ಚೆರ್ರಿ ಬಾದಾಮಿ ಸೋಯಾಬಿನ್ ಗೋದಿ ಜೋಳ ಮತ್ತಿತರೆ ಕಾಳುಗಳ ಮೇಲಿನ ಆಮದು ತೆರಿಗೆಯನ್ನು ಕಡಿಮೆಗೊಳಿಸಿದರೆ ಇದು ರೈತರ ಮೇಲೆ ವ್ಯತಿರಕ್ತ ಪರಿಣಾಮ ಬೀರಲಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಚಿನ್ನಾಕಾರ ಮಾತನಾಡಿದರು.
ನಗರದ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ, ಇಂದು ಭಾರತಕ್ಕೆ ಆಗಮಿಸುತ್ತಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ದೇಶದೊಂದಿಗೆ ಹೈನುಗಾರಿಕೆ ಮತ್ತು ಕುಕ್ಕುಟೋದ್ಯಮ ಕುರಿತಾದ ಮಾಡಿಕೊಳ್ಳುತ್ತಿರುವ ಒಪ್ಪಂದವನ್ನು ಕರ್ನಾಟಕ ಪ್ರಾಂತ ರೈತ ಸಂಘ ವಿರೋಧಿಸುತ್ತದೆ. ಹಿಂದೆ ಆರ್‌ಸಿಇಪಿ ಒಪ್ಪಂದವನ್ನು ತಿವ್ರವಾಗಿ ಪ್ರತಿಭಟಿಸಿ ಒಪ್ಪಂದಕ್ಕೆ ಸಹಿ ಹಾಕುವುದನ್ನು ತಡೆಯಲಾಗಿತ್ತು.ಆದರೆ ಈಗ ಸರಕಾರ ಆರ್‌ಸಿಇಪಿಗಿಂತಲೂ ಘೋರವಾದ ಪರಿಣಾಮ ಬೀರುವ ಒಪ್ಪಂದಕ್ಕೆ ಮುಂದಾಗಿರುವುದು ದೇಶಕ್ಕೆ ಮಾರಕವಾಗಿದೆ.ಕೋಟ್ಯಾಂತರ ಕುಟುಂಬಗಳು ಹೈನು ಮತ್ತು ಕುಕ್ಕುಟೋದ್ಯಮ ಅವಲಂಬಿಸಿವೆ.ಅಂತಹ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರಿ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.ಆದ್ದರಿಂದ ಟ್ರಂಪ್ ಸರಕಾರದೊಂದಿಗೆ ಭಾರತ ಮಾಡಿಕೊಳ್ಳುವ ಒಪ್ಪಂದವನ್ನು ವಿರೋಧಿಸುವುದಾಗಿ ತಿಳಿಸಿದರು.
ನಂತರ ರಾಷ್ಟ್ರಪತಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷ ಧರ್ಮಣ್ಣ ದೊರಿ,ಗೌರವಾಧ್ಯಕ್ಷ ನಂದಣ್ಣ ವಾರಿ,ಸಿದ್ದಲಿಂಗ ವಗ್ಗಾ,ರಾಮಯ್ಯ ಬೋವಿ,ಶಿವರಾಜ ನಾಯಕ,ಚಂದ್ರಾಮಗೌಡ,ರಾಮನಗೌಡ ಗೂಗಲ್,ರಫೀಕ ಸುರಪುರ,ಸಿದ್ದಲಿಂಗಯ್ಯ ಹಿರೇಮಠ,ಬಸವರಾಜ ಐಕೂರ ಸೇರಿದಂತೆ ಅನೇಕರಿದ್ದರು.