ಸುರಪುರ: ತಾಲೂಕಿನ ಜಾಲಿಬೆಂಚಿ ಗ್ರಾಮದ ಬಳಿಯ ಹೊರ ಹೊಲಯದಲ್ಲಿ ವಿದ್ಯೂತ್ ತಂತಿ ಹರಿದು ಬಿದ್ದು ಎಮ್ಮೆಯೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.ಗ್ರಾಮದ ಮಲ್ಲಣ್ಣ ಕಾಮತ್ ಎಂಬುವವರಿಗೆ ಸೇರಿದ ಎಮ್ಮೆಯೂ ಬಯಲಿನಲ್ಲಿ ಮೇಯಲು ಹೋಗಿರುವ ಸಮಯದಲ್ಲಿ ಮೊದಲೆ ಹರಿದು ಬಿದ್ದಿರುವ ತಂತಿಯನ್ನು ತುಳಿದ ಪರಿಣಾಮವಾಗಿ ಸಾವನ್ನಪ್ಪಿದೆ.
ಘಟನೆಯ ಕುರಿತು ಎಮ್ಮೆಯ ಮಾಲೀಕ ಮಲ್ಲಣ್ಣ ಮಾತನಾಡಿ,ನಮ್ಮ ಬದುಕಿಗೆ ಆಸರೆಯಾಗಿದ್ದ ಎಮ್ಮೆ ಸತ್ತಿರುವುದರಿಂದ ತುಂಬಾ ನಷ್ಟವುಂಟಾಗಿದೆ.ಅನೇಕ ವರ್ಷಗಳಿಂದ ಜೆಸ್ಕಾಂ ಇಲಾಖೆಯವರು ತಂತಿ ಬದಲಾಯಿಸದೆ ಇರುವುದು ಈ ದುರ್ಘಟನೆಗೆ ಕಾರಣವಾಗಿದೆ.ನನಗೆ ಬೇರೆ ಎಮ್ಮೆ ತೆಗೆದುಕೊಳ್ಳಲು ಸರಕಾರ ಪರಿಹಾರ ಧನ ನೀಡಬೇಕು.ಇಲ್ಲವಾದರೆ ನಮ್ಮ ಕುಟುಂಬ ನಡೆಸುವುದು ಕಷ್ಟವಾಗಲಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜೆಸ್ಕಾಂ ಅಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ಹಾಗು ಪಶು ಆಸ್ಪತ್ರೆ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.