ಕಲಬುರಗಿ: ಕನ್ನಡ ಮಾಧ್ಯಮ ಶಾಲೆಗಳಿಂದಲೇ ಇಲ್ಲಿಯವರೆಗೂ ಕನ್ನಡ ಭಾಷೆ ಉಳಿದಿತ್ತು. ಆದರೆ ಈಗ ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಆಂಗ್ಲ ಭಾಷೆ ಪಾದಾರ್ಪಣೆ ಮಾಡಿದ ಕಾರಣದಿಂದ ಅಲ್ಲೂ ಕನ್ನಡ ಭಾಷೆ ಕುಂದುತ್ತಿದೆ. ಹೀಗಾಗಿ ಮಾತೃ ಭಾಷೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಶರಣಬಸವ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಟಿ.ವಿ.ಶಿವಾನಂದನ್ ಸಲಹೆ ನೀಡಿದರು.
ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದ ಅನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ’ಜಾಗತಿಕ ಮಾತೃ ಭಾಷಾ ದಿನ’ ದ ಕುರಿತು ಮಾತನಾಡಿದ ಅವರು, ಭಾರತ ದೇಶದಲ್ಲಿ ಮಾತೃ ಭಾಷೆಗಳಿಗೆ ಹೆಚ್ಚಿನ ಗೌರವ ಕಾಣುತ್ತಿದ್ದೇವೆ ಎಂದರೆ ಅವುಗಳು ತಮಿಳು ಮತ್ತು ಬಂಗಾಲಿ ಭಾಷೆಗಳಾಗಿವೆ. ಆ ರಾಜ್ಯದ ಪ್ರಜೆಗಳು ಕಡ್ಡಾಯವಾಗಿ ಮಾತೃಭಾಷೆಯನ್ನು ಕಟ್ಟು ನಿಟ್ಟಾಗಿ ಆಚರಣೆಗೆ ತಂದಿರುವ ಕಾರಣದಿಂದ ಆಯಾ ರಾಜ್ಯದ ಮಾತೃ ಭಾಷೆಗಳು ಇನ್ನೂ ಜೀವಂತವಾಗಿ ಉಳಿಯಲು ಸಾಧ್ಯವಾಗಿದೆ ಎಂದರು.
ಆಯಾ ಪ್ರದೇಶದ ಮಾತೃ ಭಾಷೆಗಳಲ್ಲಿ ತನ್ನದೇ ಆದ ಗೌರವವಿದೆ. ಆ ಗೌರವ ಕೇವಲ ಮಾತೃ ಭಾಷೆಗಳ ದಿನಾಚರಣೆಗೆ ಸೀಮಿತವಾಗಿರದೇ, ಅದು ಆಡಳಿತ ವರ್ಗಕ್ಕೂ ಕಡ್ಡಾಯಗೊಳ್ಳಬೇಕು. ಆ ನಿಟ್ಟಿನಲ್ಲಿ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದರು. ದ್ರಾವಿಡ ವರ್ಗದ ಭಾಷೆಗಳಲ್ಲಿ ಹೆಚ್ಚಿನ ನೈಜತೆಯನ್ನು ಕಾಣುತ್ತೇವೆ. ಅತೀ ಪ್ರಾಚೀನ ಭಾಷೆಯಾದ ಸಂಸ್ಕೃತ ಪದ ಬಳಕೆ ಕಾಣುವದು ಅತೀ ವಿರಳ ಎಂದರು. ಅಮೇರಿಕ ಮತ್ತು ಇಂಗ್ಲೆಂಡ ದೇಶ ಬಳಸುವ ಆಂಗ್ಲ ಭಾಷೆಯನ್ನು ಈಗ ಇಡೀ ವಿಶ್ವ ಬಳಕೆ ಮಾಡುತ್ತಿದೆ. ನಮ್ಮ ಜೀವನ ಉಪಯೋಗಕ್ಕೆ ಆಂಗ್ಲ ಭಾಷೆ ಎಷ್ಟು ಅವಶ್ಯವಾಗಿದೆಯೋ, ಅಷ್ಟೇ ನಮ್ಮ ಅಸ್ತಿತ್ವಕ್ಕೆ ಮಾತೃ ಭಾಷೆ ಅವಶ್ಯಕವಾಗಿದೆ ಎಂದರು.
ಡಾ. ನಾನಾ ಸಾಹೇಬ್ ಹಚ್ಚಡದ್ ನಿರೂಪಿಸಿದರು. ಪ್ರೊ.ಸುನಿತಾ ಪಾಟೀಲ ಸ್ವಾಗತಿಸಿದರು. ಕು.ರಾಜೇಶ್ವರಿ ಪ್ರಾರ್ಥಿಸಿದರು. ಪ್ರೊ.ಪವನ ಕುಮಾರ ಕೆ.ಕಲಬುರಗಿ ವಂದಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್. ಪಾಟೀಲ, ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ.ಎಲೆನೋರಾ ಗೀತಮಾಲಾ ಅತಿಥಿಯಾಗಿ ಭಾಗವಹಿಸಿದ್ದರು.
ವಿವಿಧ ವಿಭಾಗದ ವಿದ್ಯಾರ್ಥಿಗಳಾದ ಶ್ವೇತಾ, ಪೂಜಾ, ಚಂದ್ರಶಾ, ಶಿವರುದ್ರಯ್ಯ, ಕಾಶಿಬಾಯಿ, ಪೂಜಾ, ವೈಶಾಲಿ, ದಸ್ತಗೀರ್, ಚೈತ್ರ, ದೇವೇಂದ್ರ ವಿಷಯ ಕುರಿತು ಮಾತನಾಡಿದರು.