ಕಲಬುರಗಿ: ಶಾಲಾ ಕಾಲೇಜುಗಳಲ್ಲಿ ರಾಷ್ಷ್ರಗೀತೆ ನಾಡಗೀತೆಗಳ ಜೊತೆಗೆ ಸಂವಿಧಾನದ ಪೂರ್ವಪೀಠಿಕೆಯೂ ಸಹ ಶಾಲೆಯ ಆರಂಭದಲ್ಲಿ ಹೇಳಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಸೊನ್ನ ಎಸ್.ಜಿ.ಎಸ್.ವಿ ಪದವಿ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಅಭಿಪ್ರಾಯಪಟ್ಟರು.
ಶರಣಸಿರಸಗಿ ಗ್ರಾಮದ ಸ್ವಾಮಿ ಭೀಮಾಶಂಕರ ಧಿನ್ನಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಪ್ರಕೃತಿ ಪೂರ್ವ ಪ್ರಾಥಮಿಕ ಶಾಲೆ, ಸಮಾಜಕಾರ್ಯ ಸ್ನಾತ್ತಕೊತ್ತರ ಮಹಾವಿದ್ಯಾಲಯ ಹಾಗೂ ದೇವನಾಮಪ್ರಿಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ೧೦ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪೊಷಕರ ಪಾತ್ರವು ಬಹಳಷ್ಟಿದೆ. ಮಕ್ಕಳನ್ನು ಟಿ.ವಿ, ಮೊಬೈಲ್ ದಾಸರಾಗಿ ಮಾಡಬೇಡಿ. ಮಕ್ಕಳು ಪುಸ್ತಕವನ್ನು ಓದಿಕೊಂಡಷ್ಟು ಇಡೀ ವಿಶ್ವದ ಜ್ಞಾನವನ್ನು ಸಂಪಾದಿಸಿಕೊಳ್ಳಬಹುದು. ಮಕ್ಕಳನ್ನು ಸತ್ಯದ, ವೈಚಾರಕತೆಯ ಮಾರ್ಗದಲ್ಲಿ ನಡೆಸಲು ಪಾಲಕರು ಮತ್ತು ಶಿಕ್ಷಕರು ಶ್ರಮಿಸಬೇಕು. ಪ್ರತಿಭೆ ಎಂಬುವುದು ನಿರಂತರ ಓದಿನಿಂದ ಸಿಗುತ್ತದೆ. ಇಂದಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರೀಕರಾಗಿ ರೂಪಗೊಳ್ಳುವುದರ ಜೊತೆಗೆ ಜ್ಞಾನದ ಗಣಿಗಳಾಗಿ ಹೊರಬರಬೇಕು ಎಂದರು.
ಶಾಲೆಯ ಪರಿಸರವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು. ಶಿಕ್ಷಕರು ಸಹ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ನೋಕೊಳ್ಳುವುದರ ಮೂಲಕ ಉತ್ತಮ ಕಲಿಕೆಯ ವಾತಾವರಣ ನಿರ್ಮಿಸಬೇಕು. ಮಕ್ಕಳಿಗೆ ಮಹಾತ್ಮರ ಜೀವನ ಚರಿತ್ರೆಯನ್ನು ಹೇಳುವುದರ ಮೂಲಕ ನಮ್ಮ ದೇಶದ ಇತಿಹಾಸವನ್ನು ಪರಿಚಯಿಸಿಕೊಡುವ ಕೆಲಸ ಮಾಡಬೇಕು. ಪ್ರಸ್ತುತ ಸರಕಾರಗಳು ಮಕ್ಕಳಿಗೆ ಪೂರಕವಾಗುವು ಆಧುನಿಕ ಬೋಧನಾ ಪದ್ದತಿಗಳನ್ನು ಆಳವಡಿಸಿಕೊಳ್ಳುವಂತೆ ಶಾಲಾ ಶಿಕ್ಷಕರಿಗೆ ತಿಳಿಹೇಳಬೇಕು. ಅದಕ್ಕೆ ಪೂರಕವಾದ ಬೋಧನಾ ಸಾಮಾಗ್ರಿಗಳನ್ನು ಸರಕಾರಗಳು ರಾಜ್ಯದ ಎಲ್ಲ ಸರಕಾರಿ ಅನುದಾನಿತ ಶಾಲೆಗಳಿಗೆ ನೀಡಬೇಕು. ಮುಂದುವರೆದ ದೇಶಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕೊಡುವಷ್ಟು ಪ್ರಾಮುಖ್ಯತೆ ನಮ್ಮಲ್ಲಿಯೂ ಬರಬೇಕು. ಆ ಮೂಲಕ ನಮ್ಮ ಮಕ್ಕಳನ್ನು ತಯಾರು ಮಾಡಬೇಕಾದ ಸಂಪೂರ್ಣವಾದ ಜವಾಬ್ದಾರಿ ಶಿಕ್ಷಕರು ಮತ್ತು ಪೋಷಕರ ಮೇಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಬಿ.ಆರ್.ಸಿ ಸಂಗಣ್ಣ ಜಾಬಾ, ಯಶ್ವಂತ ಪೂಜಾರಿ, ಜಿಎಸ್ ಬಾಳಿಕಾಯಿ, ದೇಸು ವಿ ರಾಠೋಡ, ಶರಣಸಿರಸಗಿ ಗ್ರಾಪಂ ಅಧ್ಯಕ್ಷೆ ರಾಜಶ್ರೀ ಪ್ರಕಾಶ ಮರತೂರ, ರೇವಣಸಿದ್ದಪ್ಪ ನಡಗೇರಿ, ಬಸವಣ್ಣಪ್ಪ ಶರಣಸಿರಸಗಿ, ಎಸ್.ಬಿ.ಡಿ.ಎಫ್ ಅಧ್ಯಕ್ಷ ಕಪಿಲಧ್ವಜ ಎಂ ಧನ್ನಿ, ಶಾಲೆಯ ಸಂಸ್ಥಾಪಕ ಮಹಾದೇವ ಬಿ ಧನ್ನಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದಶಿ ಕನಿಷ್ಕ ಎಂ ಧನ್ನಿ, ಮುಖ್ಯಗುರುಗಳಾದ ಸುಶಿಲಮ್ಮ ಎಲ್ ಸೇರಿದಂತೆ ಇತರರು ಇದ್ದರು.