ಶಹಾಬಾದ: ನಗರದ ವಿವಿಧ ಹೊಟೇಲ್, ಬೇಕರಿ, ಬಾರ್, ಚಹಾ ಅಂಗಡಿ, ಖಾನಾವಳಿ ಹಾಗೂ ವೈನ್ ಶಾಪಾಗಳಿಗೆ ಗುರುವಾರ ನಗರಸಭೆಯ ಸಿಬ್ಬಂದಿ ವರ್ಗವದರು ತೆರಳಿ ಮುಂಜಾಗೃತ ಕ್ರಮವಾಗಿ ಕೊರೊನಾ ವೈರಸ್ ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.
ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಜೆಟ್ಟೂರ್ ಮಾತನಾಡಿ, ಚೀನಾದಲ್ಲಿ ಮಹಾಮಾರಿ ಕೊರೊನಾ ವೈರಸ್‌ನಿಂದ ಈಗಾಗಲೇ ಅನೇಕ ಜನರ ಪ್ರಾಣ ತೆಗೆದುಕೊಂಡಿದೆ.ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುತ್ತಲಿದೆ.ಈಗ ಭಾರತಕ್ಕೂ ಲಗ್ಗೆ ಇಟ್ಟಿದೆ.ಈಗಾಗಲೇ ಬೀದರ್ ಜಿಲ್ಲೆಯಲ್ಲೂ ಒಬ್ಬ ವ್ಯಕ್ತಿಗೆ ಕೋರೋನಾ ವೈರಸ್ ಸೊಂಕು ತಗುಲಿರುವುದು ಕಂಡು ಬಂದಿದ್ದು, ಈ ರೋಗ ಹರಡದಂತೆ ರಾಜ್ಯ ಸರ್ಕಾರ ಸಾಕಷ್ಟು ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಸಂಕ್ರಮಿತ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಆದಷ್ಟು ಸ್ವಚ್ಛತೆಯನ್ನು ಕಾಪಾಡುವುದು ಹೊಟೇಲ್, ಬಾರ್, ಖಾನಾವಳಿ ಇತರ ಅಂಗಡಿ ಮಾಲೀಕರ ಕರ್ತವ್ಯ .ಆದ್ದರಿಂದ ಆದಷ್ಟು ಗಾಜಿನ ಗ್ಲಾಸ್ ಬಳಸದೇ ಯುಸ್ ಅಂಡ್ ಥ್ರೋ ಪೇಪರ್ ಗ್ಲಾಸ್ ಹಾಗೂ ಪ್ಲೇಟ್ ಬಳಸಲು ಸೂಚಿಸಿದರು.ಆದಷ್ಟು ಮಾಸ್ಕಗಳನ್ನು ಬಳಸಿ.ಮೊಟ್ಟೆ , ಮಾಂಸದ ಆಹಾರವಿದ್ದರೇ ಚೆನ್ನಾಗಿ ಬೇಯಿಸಿ ನೀಡಿ. ನಿಮ್ಮ ಹತ್ತಿರ ಬರುವ ಗ್ರಾಹಕರಿಗೆ ಕೈ ತೊಳೆದುಕೊಳ್ಳಲು ಹ್ಯಾಂಡ್‌ವಾಶ್ ಬಳಸಲು ಹೇಳಿ. ಈ ರೀತಿ ಮಾಡುವುದರಿಂದ ಈ ರೋಗವನ್ನು ಆದಷ್ಟು ತಡೆಗಟ್ಟಬಹುದು.
ಇಲ್ಲದಿದ್ದರೇ ಈ ಮಹಾಮಾರಿ ಜನರಲ್ಲಿ ಆತಂಕ ಸ್ಥಿತಿ ಉಂಟು ಮಾಡುತ್ತದೆ.ಯಾರಿಗಾದರೂ ಕೆಮ್ಮು,ಸೀನು, ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡರೆ ಕೂಡಲೇ ಸಮೀಪದ ಆಸ್ಪತ್ರೆಗೆ ಬೇಟಿ ತಪಾಸಣೆಗೆ ಒಳಗಾಗಿ ಅಥವಾ ಬೇರೆಯವರಲ್ಲಿ ಲಕ್ಷಣಗಳು ಕಂಡುಬಂದರೂ ತಪಾಸಣೆಗೆ ಒಳಪಡಿಸಲು ಮುಂದಾಗಿ.ಈ ರೋಗವನ್ನು ತಡೆಗಟ್ಟಲು ಮೊದಲು ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕ ಶರಣು, ರಾಜೇಶ, ಹುಣೇಶ, ಅನೀಲ ಸೇರಿದಂತೆ ನಗರಸಭೆಯ ಸಿಬ್ಬಂದಿ ವರ್ಗದವರು ಇದ್ದರು.