ರಾಜ್ಯ ಬಜೆಟ್: ಕ್ಷೌರಿಕ ಸಮಾಜಕ್ಕೆ ಅನ್ಯಾಯ

1
186

ವಾಡಿ: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಸವಿತಾ (ಕ್ಷೌರಿಕ) ಸಮಾಜದ ಅಭಿವೃದ್ಧಿಗೆ ಶೂನ್ಯ ಅನುದಾನ ನೀಡಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಲತಾಯಿ ಧೋರಣೆ ತೋರಿದ್ದಾರೆ ಎಂದು ಕೊಂಚೂರು ಮಹರ್ಷಿ ಸವಿತಾ ಪೀಠದ ಧರ್ಮಾಧಿಕಾರಿ ಪೂಜ್ಯ ಶ್ರೀಶ್ರೀಧರಾನಂದ ಸರಸ್ವತಿ ಸ್ವಾಮೀಜಿ ದೂರಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡುವ ಮೂಲಕ ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸ್ವಾಮೀಜಿ, ಬಜೆಟ್‌ನಲ್ಲಿ ನಾಯಿಂದ ಸಮುದಾಯಕ್ಕೆ ಅನ್ಯಾಯವಾಗಿದೆ. ಉಪ್ಪಾರ ನಿಗಮಕ್ಕೆ ರೂ.೧೦ ಕೋಟಿ, ವಿಶ್ವಕರ್ಮ ನಿಗಮಕ್ಕೆ ರೂ.೧೦ ಕೋಟಿ, ಅಂಬಿಗರ ಚೌಡಯ್ಯ ನಿಗಮಕ್ಕೆ ರೂ.೧೦ ಕೋಟಿ ಹಾಗೂ ಕುಂಬಾರ ಸಮುದಾಯಕ್ಕೆ ರೂ.೧೦ ಕೋಟಿ ಅನುದಾನ ಘೋಷಿಸಿರುವ ಸಿಎಂ ಯಡಿಯೂರಪ್ಪ ಅವರು ರಾಜ್ಯ ಸವಿತಾ ಅಭಿವೃದ್ಧಿ ನಿಗಮಕ್ಕೆ ಮತ್ತು ಮಹರ್ಷಿ ಸವಿತಾ ಪೀಠಕ್ಕೆ ನಯಾಪೈಸೆ ಅನುದಾನ ಪ್ರಕಟಿಸಿಲ್ಲ. ಆ ಮೂಲಕ ಸವಿತಾ (ಕ್ಷೌರಿಕ) ಸಮುದಾಯದ ಪ್ರಗತಿಯನ್ನು ಕಡೆಗಣಿಸಿದ್ದಾರೆ ಎಂದು ದೂರಿದ್ದಾರೆ.

Contact Your\'s Advertisement; 9902492681

ಸವಿತಾ ಸಮಾಜದ ಜನರು ಕೇವಲ ಕ್ಷೌರಿಕ ವೃತ್ತಿಯಡಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಜಾತಿ ನಿಂದನೆಗೊಳಗಾಗಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಸವಿತಾ ಸಮಾಜದ ಪ್ರಗತಿಗಾಗಿ ರಾಜ್ಯ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದ್ದು, ಬಜೆಟ್‌ನಲ್ಲಿ ಅನುದಾನ ಮೀಸಲಿಡದಿರುವುದು ಕೆಳ ಸಮುದಾಯಕ್ಕೆ ಬಗೆದ ದ್ರೋಹವಾಗಿದೆ. ಸಣ್ಣ ಸಣ್ಣ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ವತೋಮುಖ ಅಭಿವೃದ್ಧಿಗೆ ಬದ್ಧರಾಗುವುದಾಗಿ ಹೇಳಿದ್ದ ಯಡಿಯೂರಪ್ಪ ಅವರು ಮಾತು ತಪ್ಪಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣದ ಕನಸಿಗೆ ಹಿನ್ನಡೆಯುಂಟಾಗಿದೆ.

ಬಿಜೆಪಿ ಸರಕಾರದಿಂದ ಇಂಥಹ ತಾರತಮ್ಯವನ್ನು ರಾಜ್ಯ ಸವಿತಾ ಸಮಾಜ ನಿರೀಕ್ಷಿಸಿರಲಿಲ್ಲ. ಬಿಜೆಪಿ ಸರಕಾರಕ್ಕೆ ದೊಡ್ಡ ದೊಡ್ಡ ಮಠಗಳಷ್ಟೇ ಕಣ್ಣಿಗೆ ಕಾಣಿಸುತ್ತವೆ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಸರಕಾರ ಎಚ್ಚೆತ್ತುಕೊಂಡು ಆಗಿರುವ ಅನ್ಯಾಯ ಸರಿಪಡಿಸಬೇಕು. ರಾಜ್ಯ ಸವಿತಾ ಅಭಿವೃದ್ಧಿ ನಿಗಮಕ್ಕೆ ತಕ್ಷಣ ಅಧ್ಯಕ್ಷರ ನೇಮಕ ಮಾಡಬೇಕು. ೫೦ ಕೋಟಿ ರೂ. ಅನುದಾನ ಒದಗಿಸುವ ಮೂಲಕ ಕ್ಷೌರಿಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಸಣ್ಣ ಮಠಗಳ ಅಭಿವೃದ್ಧಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಬೇಕು ಎಂದು ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ ಒತ್ತಾಯಿಸಿದ್ದಾರೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here