ಸುರಪುರ: ನಗರದ ರಂಗಂಪೇಟೆಯ ಸುರಕ್ಷ ಮಹಿಳಾ ಸಹಕಾರ ಸಂಘದಿಂದ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದ ಸಂಘದ ಅಧ್ಯಕ್ಷೆ ಸುನಂದಾ ಎಂ.ನಾಲವಾರ ಮಾತನಾಡಿ,ಮಹಿಳೆಯರು ಇಂದು ಪುರುಷರಂತೆ ಎಲ್ಲಾ ರಂಗದಲ್ಲೂ ಸರಿಸಮಾನರಾಗಿ ನಿಂತಿದ್ದೇವೆ.ಹಿಂದೆ ಮಹಿಳೆ ಎಂದರೆ ಕೇವಲ ನಾಲ್ಕು ಗೋಡೆಗೆ ಮಾತ್ರ ಸೀಮಿತ ಎನ್ನುವ ಸಂಪ್ರದಾಯವಿತ್ತು,ಆದರೆ ಇಂದು ಮಹಿಳೆಯರು ಪುರುಷರಿಗಿಂತ ಒಂದು ಹೆಜ್ಜೆ ಮುಂದೆ ಹೋಗುವ ನಿಟ್ಟಿನಲ್ಲಿ ಜಾಗೃತರಾಗಿದ್ದೇವೆ.ಶಿಕ್ಷಣದಲ್ಲಿ ನೋಡಿದರೆ ಎಸ್.ಎಸ್.ಎಲ್.ಸಿ,ಪಿಯುಸಿ ಮತ್ತು ಪದವಿಗಳಲ್ಲಿ ಕೂಡ ಪುರುಷರಿಗಿಂತ ಮೊದಲ ಸ್ಥಾನದಲ್ಲಿದ್ದೇವೆ.ಅದರಂತೆ ರಾಜಕೀಯ ರಂಗದಲ್ಲಿ,ಔದ್ಯೋಗಿಕ ರಂಗದಲ್ಲಿ,ಕಲೆ ಮತ್ತು ಸಾಹಿತ್ಯಿಕ ರಂಗದಲ್ಲೂ ಹಿಂದೆ ಬಿದ್ದಿಲ್ಲ.ಇಷ್ಟೆಲ್ಲ ಇದ್ದರು ಮಹಿಳೆಯರಿಗೆ ಇನ್ನೂ ಹೆಚ್ಚಿನ ಪ್ರಾಧಾನ್ಯತೆ ಸಿಗದಿರುವುದು ವಿಷಾಧದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಎಸ್.ಬಿ.ಆರ್.ಕಾಲೇಜಿನ ಉಪನ್ಯಾಸಕಿ ರತ್ನಪ್ರಭಾ ಮಾತನಾಡಿ,ಮಹಿಳೆ ಇಂದು ಪುರುಷರ ಸರಿಸಮಾನವಾಗಿ ನಿಲ್ಲುತ್ತಿದ್ದರು ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಕಡಿಮೆಯಾಗುತ್ತಿಲ್ಲ.ಇದರ ವಿರುಧ್ಧ ಮಹಿಳೆಯರು ಜಾಗೃತರಾಗಬೇಕಿದೆ.ಪ್ರತಿ ಮಹಿಳೆಯು ತನಗೆ ತಾನೇ ರಕ್ಷಕಳಾಗಬೇಕಿದೆ.ಮಹಿಳೆಯರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟಿತರಾಗಿ ಬರುವ ಯಾವುದೆ ತೊಂದರೆ,ಸಮಸ್ಯೆಗಳ ವಿರುಧ್ಧ ಹೋರಾಟ ನಡೆಸಬೇಕಿದೆ.ಮಹಿಳೆಯರಿಗೆ ಮೀಸಲಾತಿ ನೀಡದೆಯಾದರು ಅದರ ಪ್ರಮಾಣ ಇನ್ನು ಹೆಚ್ಚಬೇಕು ಮತ್ತು ಮೀಸಲಾತಿ ಕಡ್ಡಾಯವಾಗಿ ಜಾರಿಯಾಗಬೇಕು.ಇದರ ಕುರಿತು ನಾವೆಲ್ಲ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತುವ ಅವಶ್ಯವಿದೆ ಎಂದರು.
ಹರ್ಬಲ್ ನ್ಯೂಟ್ರೆಷನ್ ಕ್ಲಬ್‌ನ ಸುನಿತಾ ಎಸ್.ಪಾಟೀಲ,ರಾಜೇಶ್ವರಿ ಪತ್ತಾರ ವೇದಿಕೆ ಮೇಲಿದ್ದರು.ಶಿಕ್ಷಕಿ ರಸ್ಮಿ,ಸರಸ್ವತಿ ಶಿರವಾಳ,ಮಾಲನಬಿ,ರಜಿಯಾ ಬೇಗಂ, ಶೈಲಶ್ರೀ, ಅಲಿಮಾ, ಸುನಿತಾ, ಬಬಿತಾ, ಸೋಪಮ್ಮಾ, ಗಂಗಮ್ಮಾ, ದೇವಮ್ಮಾ,ವೀಣಾ,ವಿಜಯಲಕ್ಷ್ಮೀ,ನಾಗರತ್ನಾ,ನಿರ್ಮಲಾ,ಇಮಾಂಬಿ,ಗಾಯತ್ರಿ ಇತರರು ಉಪಸ್ಥಿತರಿದ್ದರು,ಉಪನ್ಯಾಸಕಿ ಸ್ನೇಹಾಂಜನಿ ಶಾಬಾದಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.