ಶಹಾಬಾದ: ಮಹಿಳೆ ತನ್ನ ಹಕ್ಕನ್ನು ಪಡೆಯಲು ಹೋರಾಟ ನಡೆಸಿ ಗೆಲುವುದು ಪಡೆದ ದಿನವನ್ನೇ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಸಮಾಜದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ಡಾ.ಸುಧಾ ಹಾಲಕಾಯಿ ಹೇಳಿದರು.
ಅವರು ರವಿವಾರ ನಗರದ ಅಖಿಲ ಭಾರತ ವೀರಶೈವ ಸಮಾಜ ನಗರ ಘಟಕದ ವತಿಯಿಂದ ಆಯೋಜಿಸಲಾದ ರೇಣುಕಾಚಾರ್ಯ ಜಯಂತಿ ಹಾಗೂ ಅಂತರರಾಷ್ಟ್ರಿಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನೀತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಕಾಲವಿತ್ತು.ಮಾತ್ರವಲ್ಲ ಮತದಾನ ಮಾಡುವ ಹಕ್ಕು ಇರಲಿಲ್ಲ. ಯಾವುದೇ ರೀತಿಯ ಸ್ವಾತಂತ್ರ್ಯ, ಸ್ವ-ನಿರ್ಧಾರ, ಇಚ್ಛೆಗಳಿಗೆ ಬೆಲೆ ಇರುತ್ತಿರಲಿಲ್ಲ.ಆಕೆಯನ್ನು ಅಬಲೆಯಾಗಿ ಪರಿಗಣಿಸಿ ಶೋಷಣೆ ಮಾಡುವ ಕಾಲವಿತ್ತು. ಮಹಿಳೆಗೆ ಎಲ್ಲಾ ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತೆಯಾಗಿದ್ದಳು. ಆದರೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬಹು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಆದ್ದರಿಂದ ಸಮಾಜ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು.ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕೆಂದು ಹೇಳಿದರು.
ವೀರಶೈವ ಸಮಾಜದ ಅಧ್ಯಕ್ಷ ವಿಜಯಕುಮಾರ ಮುತ್ತಟ್ಟಿ ಮಾತನಾಡಿ, ಆಧ್ಯಾತ್ಮ ಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ಅಜರಾಮರ. ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡಿದ ಮಹಾನುಭಾವರು.ಕರ್ಮವನ್ನು ಕಳೆದು ಧರ್ಮವನ್ನು ಬೆಳೆಸಿ ಬದುಕನ್ನು ಬಂಗಾರಗೊಳಿಸಿದವರು.ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು ಸರ್ವರ ಬಾಳಿಗೆ ಬೆಳಕು ತೋರಿವೆ. ಸರ್ವರ ಏಳಿಗೆಗಾಗಿ ಶ್ರಮಿಸಿದ ಶ್ರೇಯಸ್ಸು ಶ್ರೀ ಜಗದುರು ರೇಣುಕಾಚಾರ್ಯರಿಗೆ ಸಲ್ಲುತ್ತದೆ ಎಂದರು. ವೀರಶೈವ ಸಮಾಜದ ಮಹಿಳಾ ಘಟಕದ ನಗರ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ, ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ವೇದಿಕೆಯ ಮೇಲಿದ್ದರು.
ಆರತಿ ನಾಲವಾರ ಪ್ರಾಸ್ತಾವಿಕ ನುಡಿದರು.ಶೃತಿ ಹೊನಗುಂಟಾ ನಿರೂಪಿಸಿ, ವಂದಿಸಿದರು.
ಸಾಹೇಬಗೌಡ ಬೋಗುಂಡಿ, ಅರುಣ ಪಟ್ಟಣಕರ್,ಶರಬು ಪಟ್ಟೇದಾರ, ಶಶಿಕಲಾ ಸಜ್ಜನ್, ಉಮಾದೇವಿ ದಂಡೋತಿ, ಶೇಕುಬಾಯಿ ಪ್ಯಾಟಿ, ನಾಗಮ್ಮ ಮುಗೈ, ಶಕುಂತಲಾ ಪಾಟೀಲ, ಪಾರ್ವತಿ ಚನ್ನಬಸಯ್ಯ, ಲಲಿತಾ ಶಿವಾನಂದ,ಕಾಶಿಬಾಯಿ ಸಾಲಿಮಠ, ಬಿಂದು ಕೋಬಾಳ ಸೇರಿದಂತೆ ಅನೇಕರು ಹಾಜರಿದ್ದರು.